ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಕಾಫಿಟೇಬಲ್ ಪುಸ್ತಕಗಳು ಬಿಡುಗಡೆಗೊಳಿಸಿದ ಸಿಎಂ ಸಿದ್ದರಾಮಯ್ಯ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಮುದ್ರಿಸಲಾಗಿರುವ ಕಾಫಿಟೇಬಲ್ ಪುಸ್ತಕಗಳು ಹಾಗೂ ಬ್ರೌಷರ್ (ಪ್ರವಾಸಿ ಮಡಿಕೆ)ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.
ಕಲಬುರಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕಲಬುರಗಿ ವತಿಯಿಂದ ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು ಹಾಗೂ ಉತ್ತೇಜನ ನೀಡಲು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಕಲಬುರಗಿ ರವರ ಆಶಯದಂತೆ ಕಲಬುರಗಿ ಜಿಲ್ಲೆಯ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಬಿಂಬಿಸುವ ಕೈಗನ್ನಡಿಯಾಗಿರುವ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಇತರೆ ಪ್ರವಾಸಿ ತಾಣಗಳ ಕುರಿತು ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನಗಳನುಸಾರ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ರೂ.11.05 ಲಕ್ಷಗಳ ಅನುದಾನದಲ್ಲಿ ಆಕರ್ಷಕ ಕಾಫಿಟೇಬಲ್ ಪುಸ್ತಕ ಮತ್ತು ಪ್ರವಾಸಿ ತಾಣಗಳ ಮಾಹಿತಿಯುಳ್ಳ ಬೋಷರ್ (ಪ್ರವಾಸಿ ಮಡಿಕೆ)ಗಳನ್ನು ಮುದ್ರಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಕುರಿತು ಕ್ರೂಢೀಕೃತ ಮತ್ತು ಸಂಕ್ಷಿಪ್ತವಾಗಿ ಮಾಹಿತಿಯನ್ನು ಒದಗಿಸಲು ಬೋಷರ್ (ಪ್ರವಾಸಿ ಮಡಿಕೆ)ಗಳು ಸಹಕಾರಿಯಾಗಲಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜರಗುವ ಪ್ರವಾಸೋದ್ಯಮ ಮೇಳಗಳು, ಟ್ರಾವೆಲ್ ಎಕ್ಸಪೋಗಳು ಮತ್ತು ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿವಿಧ ರಾಜ್ಯ ಮತ್ತು ದೇಶಗಳ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರು, ಹೂಡಿಕೆದಾರರು ಮತ್ತು ಪ್ರವಾಸೋದ್ಯಮ ಉತ್ಸಾಹಿಗಳ ಮೂಲಕ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮದ ಕುರಿತು ಹೆಚ್ಚಿನ ಪುಚಾರ ಮಾಡುವ ದೃಷ್ಟಿಯಿಂದ ಕಾಫಿಟೇಬಲ್ ಪುಸ್ತಕಗಳು ಸಹಕಾರಿಯಾಗಲಿವೆ.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ ಪಾಟೀಲ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಂಟಿ ನಿರ್ದೇಶಕರು ಡಾ.ಎಸ್. ತಿಪ್ಪೇಸ್ವಾಮಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಂಟಿ ನಿರ್ದೇಶಕರು ಡಾ.ಎಸ್. ತಿಪ್ಪೇಸ್ವಾಮಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಬೇಬಿ ಮೋಗೇರ್ ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

