ಕಲಬುರಗಿ ನೆಕ್ಸ್ಟ್‌ ಫೌಂಡೇಷನ್‌ ಮೂಲಕ ನಗರದ ಅಭಿವೃದ್ಧಿಗೆ ಕ್ರಮ ಕುಡಾ ಸಹಯೋಗದೊಂದಿಗೆ ಕ್ಯಾಡನ್ಸ್‌ ಆರ್ಕಿಟೆಕ್ಚರ್‌ ಸಂಸ್ಥೆ ಜೊತೆ ಒಪ್ಪಂದ: ಪ್ರಿಯಾಂಕ್ ಖರ್ಗೆ 

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಲುವಾಗಿ ರೂಪಿಸಿರುವ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಹಾಗೂ ಕ್ಯಾಡೆನ್ಸ್ ಆರ್ಕಿಟೆಕ್ಚರ್ ಇಂಟರ್ ಡಿಸೈನ್ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.

ಬೆಂಗಳೂರಿನಲ್ಲಿ‌ಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಕಂಪನಿಯ ಪ್ರಧಾನ ಆರ್ಕಿಟೆಕ್ಟ್‌ ಆರ್.ನರೇಂದ್ರ ಪಿಗಲ್‌ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಲುವಾಗಿ ರೂಪಿಸಿರುವ ಕಲಬುರಗಿ ನೆಕ್ಸ್ಟ್ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಲಬುರಗಿ ನಗರದ ಸೌಂದರ್ಯೀಕರಣ ಹಾಗೂ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವರು ತಿಳಿಸಿದರು.

ಕಲಬುರಗಿಯಲ್ಲಿ ಲಭ್ಯವಿರುವ ಸುಮಾರು 30 ಎಕರೆ ಪ್ರದೇಶದಲ್ಲಿ ಬಹುಸೌಲಭ್ಯಗಳನ್ನು ಒಳಗೊಂಡ ಉದ್ಯಾನವನ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ಕಲಬುರಗಿ ಅಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷ ಮೊಹಮದ್‌ ಮಝರ್‌ಖಾನ್‌ ಸಭೆಯಲ್ಲಿ ಹಾಜರಿದ್ದು ಮಾಹಿತಿ ನೀಡಿದರು.

ಉದ್ದೇಶಿತ ಉದ್ಯಾನವನದಲ್ಲಿ ಅತ್ಯಾಧುನಿಕ ಶೈಲಿಯ ವಾಯುವಿಹಾರ ಪಥಗಳು, ಅಪರೂಪದ ವೃಕ್ಷಗಳು ಹಾಗೂ ಹೂವಿನ ಗಿಡಗಳು ಇರಲಿದ್ದು, ಸುಂದರ ಹುಲ್ಲುಗಾವಲು, ಸಾರ್ವಜನಿಕರ ಆಸನಗಳು ಇರಲಿವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರಲ್ಲದೆ, ಈ ಉದ್ಯಾನವನದಲ್ಲಿನ ಕೊಳವನ್ನು ಸುಂದರ ಸರೋವರವಾಗಿ ರೂಪಿಸಲಾಗುವುದು ಎಂದು ಸಚಿವರು ಹೇಳಿದರು.

ಉದ್ಯಾನವನವು ಸುಸಜ್ಜಿತವಾದ ಕ್ರೀಡಾ ಸಂಕೀರ್ಣವನ್ನು ಹೊಂದಲಿದ್ದು, ಕ್ರೀಡಾಪಟುಗಳಿಗೆ ಉತ್ತಮ ತಾಣವಾಗಲಿದೆ ಎಂಬ ಮಾಹಿತಿ ನೀಡಿದ ಸಚಿವರು ಈ ಉದ್ಯಾನವನವು ಮುಕ್ತ ಮಾಹಿತಿ ಕೇಂದ್ರವನ್ನು ಹೊಂದಲಿದೆ ಎಂದೂ ತಿಳಿಸಿದರು.

ಇಲ್ಲಿ ವ್ಯಾಖ್ಯಾನ ಕೇಂದ್ರ, ಕಲಾವಿದರಿಗೆ ಮುಕ್ತ ವಾಯು ಗ್ಯಾಲರಿ ಹೊಂದಲಿದೆ ಎಂದು ಪುರಾತತ್ತ್ವಶಾಸ್ತ್ರ ಇಲಾಖೆಯ ಸಂರಕ್ಷಣಾ ವಾಸ್ತುಶಿಲ್ಪಿ ಶರತ್ ಚಂದ್ರ ಹೇಳಿದರು.

Spread the love

Leave a Reply

Your email address will not be published. Required fields are marked *

error: Content is protected !!