ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ಹಲವರು ಶೋಕ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ನಿಧನರಾಗಿದ್ದಾರೆ. ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾಗಿದ್ದಾರೆ.
ಕೆಲವೇ ಹೊತ್ತಿನಲ್ಲಿ ಆಸ್ಪತ್ರೆಯಿಂದ ಪದ್ಮನಾಭನಗರದ ಮನೆಗೆ ಕರೆತರಲಾಗುತ್ತದೆ. ಹಾಸನದ ಹರದನಹಳ್ಳಿಯ ಮಾವಿನಕೆರೆ ಗ್ರಾಮದಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ.
ಕಳೆದ 3 ದಿನಗಳಿಂದ ಚೆನ್ನಮ್ಮ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪತ್ನಿ ನಿಧನಕ್ಕೆ ದೇವೇಗೌಡರು ಕಣ್ಣೀರು ಹಾಕಿದ್ದಾರೆ. ಆಸ್ಪತ್ರೆಗೆ ಕುಟುಂಬಸ್ಥರು ಹಾಗೂ ರಾಜಕೀಯ ಮುಖಂಡರು ಭೇಟಿ ನೀಡುತ್ತಿದ್ದಾರೆ. ಪುತ್ರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮೊಮ್ಮಗ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿ, ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಸಹೋದರ, ಶಾಸಕ ಸಿ.ಎನ್.ಬಾಲಕೃಷ್ಣ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಚನ್ನಮ್ಮ ಅವರು ದೇವೇಗೌಡರ ರಾಜಕೀಯ ಏಳು-ಬೀಳುಗಳಲ್ಲಿ ಮತ್ತು ಸಾಂಸಾರಿಕ ಜೀವನದಲ್ಲಿ ಜೊತೆಯಾಗಿ ನಿಂತು ಕುಟುಂಬವನ್ನು ನಿರ್ವಹಿಸಿದವರು. ದೇವೇಗೌಡರು ರಾಜಕೀಯದಲ್ಲಿ ಸಕ್ರಿಯರಾಗಿದ್ದ ಕಾಲದಲ್ಲಿ ಚೆನ್ನಮ್ಮ ಅವರು ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಗಂಡನಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದರು. ಇವರ ತ್ಯಾಗ ಮತ್ತು ತಾಳ್ಮೆಯನ್ನು ಸ್ವತಃ ದೇವೇಗೌಡರು ಹಲವು ಸಂದರ್ಭಗಳಲ್ಲಿ ಭಾವುಕರಾಗಿ ಸ್ಮರಿಸಿಕೊಂಡಿದ್ದಾರೆ.
ಜೀವನದ ಪ್ರತಿ ಹಂತದಲ್ಲೂ ದೇವೇಗೌಡರಿಗೆ ಹೆಜ್ಜೆಗೆ ಹೆಜ್ಜೆಯಾಗಿ ನಿಂತ ಪತ್ನಿಯನ್ನು ಕಂಡರೆ ದೇವೇಗೌಡರಿಗೆ ಅಗಾಧವಾದ ಪ್ರೀತಿ. ಇಳಿ ವಯಸ್ಸಿನಲ್ಲೂ ದೇವಸ್ಥಾನ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಬೇಕಿದ್ದರೂ ಅವರು ಒಟ್ಟಿಗೆ ಓಡಾಡುತ್ತಿದ್ದರು. ಕೊನೆ ಕ್ಷಣದಲ್ಲೂ ದೇವೇಗೌಡ ಅವರೇ ಪತ್ನಿಯನ್ನು ಖುದ್ದಾಗಿ ಆಸ್ಪತ್ರೆಗೆ ದಾಖಲಿಸಿದ್ದರು.
1954ರಲ್ಲಿ ದೇವೇಗೌಡರೊಂದಿಗೆ ವಿವಾಹವಾಗಿತ್ತು. 72 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. 2001 ರಲ್ಲಿ ಇವರ ಮೇಲೆ ಆಸಿಡ್ ದಾಳಿಯಾಗಿತ್ತು. ಚೆನ್ನಮ್ಮ ಅವರಿಗೆ 6 ಮಂದಿ ಮಕ್ಕಳು. ಹೆಚ್.ಡಿ.ಬಾಲಕೃಷ್ಣ, ಹೆಚ್.ಡಿ.ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರಮೇಶ್ ನಾಲ್ವರು ಗಂಡು ಮಕ್ಕಳು ಹಾಗೂ ಅನಸೂಯ ಹಾಗೂ ಶೈಲಜಾ ಪುತ್ರಿಯರು.
ಚೆನ್ನಮ್ಮ ಅವರ ನಿಧನದ ಸುದ್ದಿ ತೀವ್ರ ಆಘಾತ ಮತ್ತು ಬೇಸರವನ್ನುಂಟು ಮಾಡಿದೆ ಎಂದು ರಾಜ್ಯ ರಾಷ್ಟ್ರೀಯ ನಾಯಕರು ಸೇರಿದಂತೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.

