ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ, ವಿಶೇಷ ಉಪನ್ಯಾಸ, ಹಿರಿಯ ಸದಸ್ಯರಿಗೆ ಗೌರವ ಸನ್ಮಾನ | ಕನ್ನಡದ ಭಾಷೆ, ನೆಲ ಜಲ ಸಂರಕ್ಷಣೆ ಕಸಾಪ ಉದ್ದೇಶ: ಕಲಾಲ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನೆಲ, ಜಲ, ಭಾಷೆ ಸಂರಕ್ಷಣೆ ಮಾಡುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಜನ್ಮ ತಾಳಿದೆ ಎಂದು ಸರ್ಕಾರಿ ಬಾಲಕರ ಪ್ರೌಢ ಶಾಲೆ ಮುಖ್ಯಗುರು ಕಾಶಿರಾಯ ಕಲಾಲ್ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಚಾಲಿತ ವಿದ್ಯಾನಿಕೇತನ ಪ್ರೌಢ ಶಾಲೆಯ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ, ವಿಶೇಷ ಉಪನ್ಯಾಸ, ಪರಿಷತ್ತಿನ ಹಿರಿಯ ಸದಸ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆ ಸರಳ ಭಾಷೆವಾಗಿದೆ. ಕನ್ನಡ ಭಾಷೆ ಪ್ರತಿಯೊಬ್ಬರ ಮನೆ ಹೆಬ್ಬಾಗಿಲು ಇದ್ದಂತೆ. ಎಲ್ಲರೂ ಕನ್ನಡ ಭಾಷೆಯ ಅಭಿಮಾನ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಬೇರೆ ಭಾಷೆಗಳನ್ನು ದ್ವೇಷಿಸಬಾರದು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮರವಾಗಿ ರಾಜ್ಯದಲ್ಲಿ ಬೆಳೆದು ಕರ್ನಾಟಕದ ಆರು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆವಾಗಿದೆ ಎಂದು ಹೇಳಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ವಿಶ್ವದಲ್ಲೇ ಶ್ರೇಷ್ಠವಾದ ಭಾಷೆಯಾಗಿದೆ. ಎಲ್ಲರಲ್ಲೂ ಅರಿವು ಮೂಡಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಮಾತೃಭಾಷೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಉಳಿದ ಇಂಗ್ಲಿಷ, ಹಿಂದಿ ಜತೆಗೆ ಇರಲಿ. ಕನ್ನಡ ಕಟ್ಟುವ, ಬೆಳೆಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ ಚವ್ಹಾಣ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ ಅವರು ಮಾತನಾಡಿದರು.
ಕಸಾಪ ಹಿರಿಯ ಅಜೀವ ಸದಸ್ಯರಾದ ರಾಜಶೇಖರ ಗೋಣಗಿ, ಸಂಜಯ ಕೋಟ್ರಕಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಸಾಪ ತಾಲೂಕು ಗೌರವಾಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ, ಮುಖ್ಯಗುರು ರಮೇಶ ಯಾದವಾಡ, ಪ್ರಮುಖರಾದ ಬಸವರಾಜ ಬೊಮ್ಮನಳ್ಳಿ, ಮಹೇಶ, ಶ್ರೀದೇವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ಪ್ರಾರ್ಥನೆ ಗೀತೆ ಹಾಡಿದರು, ಲಲಿತಮ್ಮ ರೇಷ್ಮಿ ಸ್ವಾಗತಿಸಿದರು, ಬಸಪ್ಪ ಯಂಬತ್ನಾಳ ನಿರೂಪಣೆ ಮಾಡಿದರು, ಅನಿಲಕುಮಾರ ಸನ್ಮುಖ ವಂದಿಸಿದರು.

