ನಗರಾಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳಿಗೆ ಅಡಿಗಲ್ಲು | ಕಲಬುರಗಿ ನಗರದ ಸಮಗ್ರ ಅಭಿವೃದ್ದಿಗೆ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ನಗರದ ಸಮಗ್ರ ಅಭಿವೃದ್ದಿಗಾಗಿ ನೀಲಿನಕ್ಷೆ ತಯಾರಿಸಲಾಗಿದ್ದು ವರ್ತಮಾನ ಹಾಗೂ ಭವಿಷ್ಯದ ಜನರನ್ನು ಗುರಿಯಾಗಿಸಿಕೊಂಡು ಅವರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಂಡ ವಿವಿಧ ಯೋಜನೆಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ರೂ 3.16 ಕೋಟಿ ವೆಚ್ಚದಲ್ಲಿ 17 ವಾರ್ಡ್ ಗಳಲ್ಲಿನ ಉದ್ಯಾನವನಗಳ ಅಭಿವೃದ್ದಿ, ರೂ 5 ಕೋಟಿ ವೆಚ್ಚದಲ್ಲಿ 4 ಪ್ರಮುಖ ಸರ್ಕಲ್ ಗಳ ಅಭಿವೃದ್ದಿ, ರೂ3.58 ಕೋಟಿ ವೆಚ್ಚದಲ್ಲಿ 18 ರುದ್ರಭೂಮಿಗಳ ಅಭಿವೃದ್ದಿ ಹಾಗೂ ರೂ 25 ಲಕ್ಷ ವೆಚ್ಚದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಅಭಿವೃದ್ದಿ ಹೀಗೆ ಒಟ್ಟು 40 ಕಾಮಗಾರಿಗಳು ಸೇರಿವೆ ಎಂದರು.
ಅಪ್ಪಾ ಕೆರೆ ಹಾಗೂ ಕಲಬುರಗಿ ಕೋಟೆ ಅಭಿವೃದ್ದಿ ಸೇರಿದಂತೆ ಹಲವಾರು ಜನಪರ ಹಾಗೂ ಪ್ರವಾಸೋದ್ಯಮ ಪೂರಕ ಯೋಜನೆಗಳು ಕಲಬುರಗಿ ಗೆ ಮುಂಬರುವ ದಿನಗಳಲ್ಲಿ ಬರಲಿವೆ ಎಂದ ಖರ್ಗೆ, ಕಾಂಗ್ರೆಸ್ ಸರ್ಕಾರ ಕಲಬುರಗಿ ಜಿಲ್ಲೆಯನ್ನು ಅದನ್ನೂ ಪ್ರಮುಖವಾಗಿ ಕಲಬುರಗಿ ನಗರದ ಸಮಗ್ರ ಅಭಿವೃದ್ದಿ ಮಾಡಿ ನವ ನಗರ ನಿರ್ಮಾಣ ಮಾಡಲಿದೆ ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆಗೆ ತಾರತಮ್ಯ ಎಸಗುತ್ತಿದೆ ಎಂದು ಹೇಳಿದ ಸಚಿವರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಜಾರಿಗೆ ತರಲಾದ ಜಲ್ ಜೀವನ್ ಮಿಷನ್ ಕಾರ್ಯಕ್ರಮಕ್ಕೆ ಬೇಕಾಗುವ 15,000 ಕೋಟಿ ಅನುದಾನ ನೀಡಬೇಕಿತ್ತು. ಆದರೆ, ಅನುದಾನ ಬಿಡುಗಡೆ ಮಾಡದೇ ಇರುವುದರಿಂದಾಗಿ ರಾಜ್ಯ ಸರ್ಕಾರ ತನ್ನ ಅನುದಾನ ಬಳಸಿ ಕಾಮಗಾರಿ ಮುಂದುವರೆಸಿದೆ ಎಂದರು.
ಅಡುಗೆ ಅನಿಲ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಇದನ್ನು ವಿಕಸಿತ್ ಭಾರತ ಎನ್ನುಬಹುದಾ? ಜನರು ಸಂಕಟಪಡುತ್ತಿರುವಾಗ ಮೋದಿ ಖರ್ಚು ಕಡಿಮೆ ಮಾಡಿ ಎನ್ನುತ್ತಿದ್ದಾರೆ. ಮನೆ ನಡೆಸಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ. ಮೋದಿ ಅವರ ಆರ್ಥಿಕ ನೀತಿ ಕೇವಲ ಅದಾನಿ ಹಾಗೂ ಅಂಬಾನಿಯಂತ ಶ್ರೀಮಂತರಿಗೆ ಮಾತ್ರ ಅನುಕೂಲವಾಗಿದೆ ಹೊರತು ಬಡವರಿಗೆ ಅನುಕೂಲವಾಗಿಲ್ಲ ಎಂದರು.
ಮೋದಿ ಕನಿಷ್ಠ 200 ದೇಶಗಳಿಗೆ ಭೇಟಿ ನೀಡಿರಬಹುದು. ಅವರ ಪ್ರವಾಸಕ್ಕೆ ರೂ 850 ಕೋಟಿ ಖರ್ಚಾಗಿದೆ. ಅವರ ಖರ್ಚಿಗೆ ಹೋಲಿಸಿದರೆ, ದೇಶಕ್ಕೆ ನಯಾಪೈಸೆ ಅನುಕೂಲವಾಗಿಲ್ಲ ಎಂದು ಟೀಕಿಸಿದ ಖರ್ಗೆ, ರಾಜ್ಯ ಸರ್ಕಾರ ವಾರ್ಷಿಕ ರೂ 6.50 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ಕೊಡುತ್ತಿದೆ. ಅದಕ್ಕೆ ಬದಲಾಗಿ ಕೇಂದ್ರ ನಮಗೆ ವಾಪಸ್ ಕೊಡುತ್ತಿರುವುದು ಶೂನ್ಯ ಎಂದರು.
ಕಾಂಗ್ರೆಸ್ ಸರ್ಕಾರ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆಯನ್ನು ಸ್ಮರಿಸಿದ ಪ್ರಿಯಾಂಕ್, ಆರ್ಟಿಕಲ್ 371(ಜೆ) ಜಾರಿಗೆ ಬಂದುದ್ದು ಕಾಂಗ್ರೆಸ್ ಅವಧಿಯಲ್ಲಿ. ಈ ಮಹತ್ತರ ಕಾರ್ಯಕ್ಕೆ ಖರ್ಗೆ ಅವರ ಕೊಡುಗೆ ಪ್ರಮುಖವಾಗಿದೆ. ಕಲಬುರಗಿಯಲ್ಲಿ ಹಲವಾರು ಪ್ರಮುಖ ಯೋಜನೆಗಳು ಕೂಡಾ ಖರ್ಗೆ ಅವರ ಅವಧಿಯಲ್ಲಿ ಬಂದಿವೆ. ಇಎಸ್ ಐ ನಂತ ಬಡವರ ಪರ ಆಸ್ಪತ್ರೆ ಸ್ಥಾಪನೆಯಾಗಿರುವುದು ಪ್ರಮುಖವಾಗಿದೆ. ಆದರೂ, ಬಿಜೆಪಿಗರ ನಮ್ಮನ್ನು ಟೀಕಿಸುತ್ತಾರೆ. ಅವರ ಮಕ್ಕಳು ಆರ್ಟಿಕಲ್ 371 J ಸೌಲಭ್ಯ ಪಡೆದುಕೊಳ್ಳುವುದಿಲ್ಲವೇ? ಅವರ ಮಕ್ಕಳು ಇಎಸ್ ಐ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.
ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್ ಮಾತನಾಡಿ, ಕಲಬುರಗಿ ನಗರದ ಅಭಿವೃದ್ದಿಗೆ ಬದ್ಧವಿದ್ದು, ಸರ್ಕಲ್, ಗಾರ್ಡನ್ ಸೇರಿದಂತೆ ಮೂಲಭೂತ ಸೌಲಭ್ಯ ಅಭಿವೃದ್ದಿಗೊಳಿಸಲಾಗುವುದು ಎಂದರು.
ಎಂಎಲ್ ಎ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಅವಿರತ ಶ್ರಮ ಹಾಗೂ ಅನುದಾನ ಬಿಡುಗಡೆಗೆ ಕೈಗೊಂಡ ಕ್ರಮಗಳಿಂದಾಗಿ ಇಂದು ಕಲಬುರಗಿ ನಗರದ ಅಭಿವೃದ್ದಿಗೆ ಸಹಕಾರಿಯಾಗುತ್ತಿದೆ ಎಂದರು.
ವೇದಿಕೆಯ ಮೇಲೆ ಎಂಎಲ್ಸಿ ಜಗದೇವ ಗುತ್ತೇದಾರ, ಜಿಲ್ಲಾಧಿಕಾರ ಮೊಹಮ್ಮದ್ ಇಕ್ರಮುಲ್ಲಾ ಷರೀಷ್ ಸೇರಿದಂತೆ ಹಲವರಿದ್ದರು.

