Oplus_0

ರಟಗಲ್ ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಗೆ ಪತ್ರ 

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಕಲ್ಯಾಣ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಚಿಂಚೋಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅವಿಮುಕ್ತ ಕ್ಷೇತ್ರವಾದ ಶ್ರೀ ರೇವಗ್ಗಿ (ರಟಗಲ್) ಶ್ರೀ ರೇವಣಸಿದ್ದೇಶ್ವರ ದೇವಾಲಯವು ಪ್ರಾಚೀನ ಪರಂಪರೆಯ ಭವ್ಯ ಇತಿಹಾಸ ಹೊಂದಿರುವ ದೇವಾಲಯವಾಗಿದ್ದು, ಸದರಿ ದೇವಾಲಯಕ್ಕೆ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ, ಆಂದ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ಸೇರಿದಂತೆ ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಶ್ರಾವಣ ಮಾಸ ಸೇರಿದಂತೆ ಹಬ್ಬ ಹರಿದಿನಗಳು, ಜಾತ್ರೆ, ಅಮವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭಕ್ತಿ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ.

ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಈ ದೇವಾಲಯವು ಕಲಬುರಗಿ ಜಿಲ್ಲೆಯಲ್ಲಿ ಎ-ಗ್ರೇಡ್ ದೇವಸ್ಥಾನವಾಗಿದೆ. ದೇವಸ್ಥಾನವು ಬೆಟ್ಟಗುಡ್ಡಗಳ ಸುಂದರ ಪರಿಸರವನ್ನು ಹೊಂದಿದ್ದು, ಧಾರ್ಮಿಕ ಯಾತ್ರೆಯೊಂದಿಗೆ ಪ್ರವಾಸಿತಾಣವಾಗಿಯೂ ಪರಿವರ್ತಿಸಬಹುದಾಗಿದ್ದು, ಸುಸಜ್ಜಿತವಾದ ಕೊಠಡಿಗಳು, ಭವ್ಯವಾದ ಯಾತ್ರಿಕ ನಿವಾಸ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಮೂಲಭೂತ ಸೌಕರ್ಯಗಳ ಅನುಷ್ಠಾನಕ್ಕಾಗಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ನಾಗಲಿಂಗಯ್ಯ ಮಠಪತಿ, ಕಾರ್ಯದರ್ಶಿ, ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ(ರಿ), ಜಿಲ್ಲಾ ಘಟಕ, ಕಲಬುರಗಿ ರವರು ನನಗೆ ಮನವಿ ಸಲ್ಲಿಸಿರುತ್ತಾರೆ.

ಪ್ರಯುಕ್ತ, ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಪುಣ್ಯ ಕ್ಷೇತ್ರವಾದ (ರಟಗಲ್) ಶ್ರೀ ರೇವಣಸಿದ್ದೇಶ್ವರ ದೇವಾಲಯಕ್ಕೆ ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೇ.20 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!