ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಕುರುಬ ಸಮಾಜ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಜನಪ್ರಿಯ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಡಿ.ಕೆ.ಶಿವುಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದರು.
ಪಟ್ಟಣದ ಕನಕ ಭವನದಲ್ಲಿ ಕುರುಬ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ ಸಮಾಜ ಕಲ್ಯಾಣ, ಪ್ರವಾಸೋದ್ಯಮ, ಐಟಿಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಚಿವರಾಗಿ ಅತ್ಯಂತ ಯಶಸ್ವಿಯಾಗಿ ಹಾಗೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಹೀಗಾಗಿ ಇವರಿಗೆ ರಾಜ್ಯದ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.
ಕುರುಬ ಸಮಾಜದ ಹಿರಿಯ ಮುಖಂಡ ಜುಮ್ಮಣ್ಣ ಪೂಜಾರಿ ಮಾತನಾಡಿ, ಎಲ್ಲ ಜಾತಿ ಜನಾಂಗದವರನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ ಸಚಿವರಾಗಿ ಚಿತ್ತಾಪುರ ಮತಕ್ಷೇತ್ರದ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಅದರಲ್ಲೂ ಸ್ಪೋರ್ಟ್ಸ್ ಹಬ್, ಎಜುಕೇಷನ್ ಹಬ್, ಮೃಗಾಲಯ ನಿರ್ಮಾಣ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಅಲ್ಲದೇ ರಾಜ್ಯ ರಾಷ್ಟ್ರೀಯ ಹೆದ್ದಾರಿ, ಆಸ್ಪತ್ರೆ, ಶಾಲಾ ಕೋಣೆಗಳು, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇಂತಹ ಅಭಿವೃದ್ಧಿ ಪರ ಇರುವ ಪ್ರಿಯಾಂಕ್ ಖರ್ಗೆ ಅವರನ್ನು ಡಿಸಿಎಂ ಮಾಡಿದರೆ ಎಲ್ಲ ಸಮಾಜದವರು ಸ್ವಾಗತಿಸುತ್ತಾರೆ ಎಂದು ಹೇಳಿದರು.
ಯುವ ಮುಖಂಡ ಸಂತೋಷ ಪೂಜಾರಿ ಮಾತನಾಡಿ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿ.ಎಸ್.ಐ ಹಗರಣ ಮತ್ತು ಬಿಟ್ ಕಾಯಿನ್ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರದ ಹಗರಣಗಳನ್ನು ದೈರ್ಯವಾಗಿ ಬಯಲಿಗೆಳೆದ ದಿಟ್ಟ ನಾಯಕರಾಗಿದ್ದು. ಇವರ ಹೋರಾಟ ಜನಪರ ಧ್ವನಿಯ ಪರಿಣಾಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಪ್ರಿಯಾಂಕ್ ಖರ್ಗೆಯವರು ಮಲ್ಲಿಕಾರ್ಜುನ ಯವರ ಪುತ್ರ ಎಂಬ ಗುರುತಿಗಿಂತಲು ಸ್ವಂತ ಪರಿಶ್ರಮ, ದಕ್ಷ ಆಡಳಿತ, ಅಭಿವೃದ್ಧಿ ಚಿಂತನೆ ಮೂಲಕ ತಮ್ಮ ರಾಜಕೀಯ ಪ್ರಭಾವ ಬೆಳೆಸಿಕೊಂಡಿದ್ದಾರೆ. ಇಂತವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜ್ಯದ ಯುವ ಸಮುದಾಯಕ್ಕೆ, ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ಮುಖಂಡರಾದ ಯಲ್ಲಾಲಿಂಗ ಪೂಜಾರಿ ಮುಗುಟಾ, ಬಸವರಾಜ ಪೂಜಾರಿ ಮೊಗಲಾ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಜಗನ್ನಾಥ ಆಲೂರ, ಯಲ್ಲಾಲಿಂಗ ದಿಡ್ಡಿಮನಿ, ನಾಗೇಶ್ ಪೂಜಾರಿ, ಶಿವಶರಣಪ್ಪ ಪೂಜಾರಿ, ದೇವಿಂದ್ರಪ್ಪ ಅಲ್ಲೂರಕರ್, ನಾಗು ಪೂಜಾರಿ ಸೇರಿದಂತೆ ಇತರರು ಇದ್ದರು.

