ನಾಗರೆಡ್ಡಿ ಪಾಟೀಲ ಕರದಾಳ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಕೈಗೊಂಡ ಬೆಂಗಳೂರು ಪ್ರಯಾಣ ರದ್ದು, ಬೆಂಬಲಿಗರಿಗೆ ತೀವ್ರ ನಿರಾಶೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಶಿಕ್ಷಣ ಪ್ರೇಮಿಗಳು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಬುಧವಾರ ಕೈಗೊಂಡ ಬೆಂಗಳೂರು ಪ್ರಯಾಣ ಹಠಾತ್ ಆಗಿ ರದ್ದುಗೊಂಡಿದೆ. ಇದರಿಂದ ಬೆಂಬಲಿಗರಿಗೆ ತೀವ್ರ ನಿರಾಶೆಯನ್ನು ಉಂಟುಮಾಡಿತು.
ಪಟ್ಟಣದಲ್ಲಿ ಬುಧವಾರ ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಪ್ರಭುರಾಜ ಕಾಂತಾ ನೇತೃತ್ವದಲ್ಲಿ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿ ಬೆಂಗಳೂರಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮನವಿ ಸಲ್ಲಿಸುವ ವಿಷಯ ಕುರಿತು ಮಾಹಿತಿ ನೀಡಿದ್ದರು. ಅದರಂತೆ ರಾತ್ರಿ ಬೀದರ್ ಯಶವಂತಪುರ ರೈಲು ಮೂಲಕ 150 ಬೆಂಬಲಿಗರು ಹೋಗಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅಷ್ಟರಲ್ಲೇ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ (ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ, ಶಿವಣ್ಣ ಮಳವಳ್ಳಿ) ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಪತ್ರಿಕಾ ಪ್ರಕಟಣೆ ನೀಡಿದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಬೆಂಬಲಿಗರು ಒಬ್ಬರನ್ನೊಬ್ಬರು ಚರ್ಚಿಸಿ ಬೆಂಗಳೂರು ಪ್ರಯಾಣ ರದ್ದು ಮಾಡಿದರು ಇದು ಬೆಂಬಲಿಗರಿಗೆ ನಿರಾಶೆವನ್ನುಂಟು ಮಾಡಿತು. ಹೀಗಾಗಿ ನಾಗರೆಡ್ಡಿ ಪಾಟೀಲ ಅವರ ಬೆಂಬಲಿಗರ ಮುಂದಿನ ನಡೆ ಏನೆಂಬುದು ಕಾದುನೋಡಬೇಕಿದೆ.
ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಪ್ರಭುರಾಜ ಕಾಂತಾ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಪುರಸಭೆ ಮಾಜಿ ಸದಸ್ಯ ವಿನೋದ್ ಗುತ್ತೇದಾರ, ನ್ಯಾಯವಾದಿ ಎಸ್.ಎನ್.ಪಾಟೀಲ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕಳೆದ 20 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ನಾಗರೆಡ್ಡಿ ಪಾಟೀಲ ಅವರು, ಸ್ಥಳೀಯವಾಗಿ ಎಲ್ಲರ ಕೈಗೆ ಸುಲಭವಾಗಿ ಸಿಗುವ ಹಾಗೂ ಎಲ್ಲಾ ಜಾತಿ ಜನಾಂಗದವರನ್ನು ಸಮಾನವಾಗಿ ತೆಗೆದುಕೊಂಡು ಹೋಗುವವರಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಾನುರಾಗಿಯಾಗಿದ್ದಾರೆ. ಹೀಗಾಗಿ ಇವರನ್ನು ಎಂಎಲ್ಸಿ ಯಾಗಿ ಮಾಡಬೇಕು ಎಂದು ಬಲವಾಗಿ ಆಗ್ರಹಿಸಿದ್ದರು.
ಈಗಾಗಲೇ ಹಿಂದುಳಿದವರಿಗೆ ಅವಕಾಶ ನೀಡಲಾಗಿದೆ ಹೀಗಾಗಿ ಈ ಬಾರಿ ಮೇಲ್ವರ್ಗದ ನಾಗರೆಡ್ಡಿ ಪಾಟೀಲ ಅವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಎಂಎಲ್ಸಿ ಸ್ಥಾನಕ್ಕೆ ಅರ್ಹರಾಗಿದ್ದಾರೆ, ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ ಹೀಗಾಗಿ ಅವರಿಗೆ ಕೂಲಿ ಕೊಡಬೇಕು ಎಂದು ಒತ್ತಾಯಿಸಿದ್ದರು.
ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಹಿರಿಯ ಮುಖಂಡ ನಾಗರೆಡ್ಡಿ ಪಾಟೀಲ ಒಬ್ಬ ನಿಷ್ಠಾವಂತ ಹಾಗೂ ಪ್ರಾಮಾಣಿಕ ನಾಯಕರಾಗಿದ್ದು, 2005 ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ದಿಗ್ಗಾಂವ ಭಾಗದಲ್ಲಿ ಉತ್ತಮ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಮನದಲ್ಲಿ ಶಾಶ್ವತವಾಗಿ ನೆಲೆ ಉರಿದ್ದಾರೆ ಎಂದು ಹೇಳಿದ್ದರು.

