ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸನ್ಮಾನ | ಸಮಯದ ಸದುಪಯೋಗಪಡಿಸಿಕೊಂಡು ಉನ್ನತ ಸಾಧನೆ ಮಾಡಿ: ಡಾ. ಸುಭಾಷ ಚಂದ್ರ ದೊಡ್ಡಮನಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ವಿದ್ಯಾರ್ಥಿ ಜೀವನ ಶ್ರೇಷ್ಟ ಜೀವನ ಎಷ್ಟೇ ಓದಿದರು ಕಡಿಮೆಯೇ, ಕಾರಣ ವಿದ್ಯಾರ್ಥಿಗಳು ಸಮಯವನ್ನು ಹಾಳು ಮಾಡದೆ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಏನ್ನನ್ನಾದರೂ ಸಾಧಿಸಿ ಎಂದು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಸುಭಾಷ ಚಂದ್ರ ದೊಡ್ಡಮನಿ ಅವರು ವಿದ್ಯಾರ್ಥಿಗಳಿಗೆ ಎಂದು ಕಿವಿಮಾತು ಹೇಳಿದರು.
ನಗರದ ಶೆಟ್ಟಿ ಕಾಂಪ್ಲೆಕ್ಸನಲ್ಲಿರುವ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಸನ್ಮಾನ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಬರಿ ಅಂಕಗಳಿಗಾಗಿ ಮಾತ್ರ ಓದದೆ ಓದಿನ ಜೊತೆ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಕೌಶಲ್ಯಯುತ ಶಿಕ್ಷಣದಿಂದ ಒಂದಿನ ಒಂದಿಷ್ಟು ಸಂಪಾದನೆ ಮಾಡಿದರೆ ತಂದೆ ತಾಯಿಯರಿಗೂ ಸಹಾಯ ಮಾಡಿದಂತಾಗುತ್ತದೆ ಎಂದು ನುಡಿದರು.
ನಾವು ಮಾಡುವ ಕೆಲಸವೇ ಆಗಿರಲಿ ಶಿಕ್ಷಣವೇ ಆಗಿರಲಿ ಛಲದಿಂದ ಮಾಡಿ, ಜೀವನದಲ್ಲಿ ಉನ್ನತವಾದ ಗುರಿಯನ್ನು ಇಟ್ಟು ಅದನ್ನು ಮುಟ್ಟಲು ಕಠಿಣ ಪರಿಶ್ರಮದಿಂದ ಓದಿನ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ತಂದೆ ತಾಯಿಯರು ಕಷ್ಟ ಪಟ್ಟು ಶಾಲೆ, ಕಾಲೇಜಿಗೆ ಕಳಿಸಿರುತ್ತಾರೆ ಅವರ ಭರವಸೆಯನ್ನು ಹುಸಿಗೊಳಿಸದೆ ಶ್ರಮ ಪಡಿ ಎಂದರು. ಸಧ್ಯಕ್ಕೆ ಸೋಸಿಯಲ್ ಮೀಡಿಯಾ ಕಾಲವಾಗಿದ್ದು, ಅನಾವಶ್ಯಕ ರೀಲ್ಸ್, ಪೋಸ್ಟ್ ಗಳನ್ನು ನೋಡಲು ಮೊಬೈಲ್‌ನ್ನು ಬಳಸದೆ ಅದರಿಂದ ಉಪಯೋಗವಾಗುವಂತಹವುಗಳನ್ನೆ ನೋಡಿ ನಿಮ್ಮ ಜೀವನ ಉಜ್ವಲಗೊಳಿಸಿಕೊಳ್ಳಿ ಎಂದರು.
ಬರಿ ಓದಿನಿಂದ ಶ್ರೇಷ್ಟ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ತಂದೆ ತಾಯಿಯರ ಹೆಸರಿಗೆ ಕಳಂಕ ಬರದಂತೆ ಜೀವನ ಸಾಗಿಸಿ, ಸಾಧಕರ ಜೀವನ ಚರಿತ್ರೆಯನ್ನು ಓದಿ ಪ್ರೇರಣೆಯನ್ನು ಪಡೆದುಕೊಂಡು ಮುಂದೆ ಸಾಗಿ ಎಂದ ತಿಳಿ ಹೇಳಿದರು.
ಉದ್ಘಾಟನೆಯನ್ನು ನೆರವೇರಿಸಿದ ಆರಾಧನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚೇತನಕುಮಾರ ಗಾಂಗಜಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕಾದರೆ ಏಕಾಗ್ರತೆ, ಸಮಯ ಪಾಲನೆ, ಶಿಸ್ತು ಬದ್ಧತೆ ಕಡೆ ಹೆಚ್ಚು ಗಮನ ಹರಿಸಬೇಕು, ಪರಿಶ್ರಮ ಇದ್ದಾಗ ಸಾಧನೆ ಸಾಧ್ಯ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ಅಧ್ಯಕ್ಷ ಪ್ರಭುಲಿಂಗ ಮುಲಗೆ ಮಾತನಾಡಿ ನಮ್ಮ ಸಾಧನೆಯ ಹಾದಿಯಲ್ಲಿ ನಿಂದಕರು ಇದ್ದೇ ಇರುತ್ತಾರೆ ಅದನ್ನು ಕಿವಿ ಹಾಕಿಕೊಳ್ಳದೆ ಮುಂದೆ ಸಾಗಿ ಎಂದರು. ತಂದೆ ತಾಯಿಯರು ಕಷ್ಟ ಪಟ್ಟು ಶಿಕ್ಷಣ ಕಲಿಸಲು ಕಳಿಸಿರುವಾಗ ಅವರ ಆಸೆ, ಭರವಸೆಯನ್ನು ಹುಸಿಗೊಳಿಸದೆ ಸಾಧನೆ ಕಡೆಗೆ ಹೆಚ್ಚು ಗಮನ ಕೊಡಲು ಸಲಹೆ ನೀಡಿದರು.
ಪತ್ರಕರ್ತ ಹಾಗೂ ಕಸಾಪ ಉತ್ತರ ವಲಯ ಕಾರ್ಯದರ್ಶಿ ಹಣಮಂತರಾಯ ದಿಂಡೂರೆ, ಅರ್ಥಶಾಸ್ತ್ರ ಉಪನ್ಯಾಸಕ ಕಾಶಿನಾಥ ಪಾಟೀಲ, ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಗೌರವ ಅಧ್ಯಕ್ಷ ಸಾಯಿಕುಮಾರ ಕಲ್ಲೂರ, ಕಾಲೇಜಿನ ಅಧ್ಯಕ್ಷ ಡಾ.ಅಂಬಾರಾಯ ಹಾಗರಗಿ, ಪ್ರಾಚಾರ್ಯ ನಾಗೇಶ ತಿಮ್ಮಾಜಿ, ಎನ್.ಎಸ್. ಎಸ್. ಅಧಿಕಾರಿ ರಾಜೇಶ್ವರಿ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಪ್ರಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ನಾಗೇಶ ತಿಮ್ಮಾಜಿ ಬೆಳಮಗಿ ಸ್ವಾಗತಿಸಿದರು, ನಾಗವೇಣಿ ಹಿರೇಮಠ ನಿರೂಪಿಸಿದರು, ನಡೆಸಿಕೊಟ್ಟರು. ಡಾ. ಅಂಬಾರಾಯ ಹಾಗರಗಿ ವಂದಿಸಿದರು.
