ಹಳೆ ಪಿಂಚಣಿ ಯೋಜನೆ ಜಾರಿ ಸಂಬಂಧ ಸರ್ಕಾರಕ್ಕೆ ವಾರದೊಳಗೆ ವರದಿ ಸಲ್ಲಿಸುವ ಭರವಸೆ: ನೌಕರರ ಸಂಘ ಅಭಿನಂದನೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆಯ ಪಿಂಚಣಿ ಯೊಜನೆಯನ್ನು ಜಾರಿಗೊಳಿಸುವ ಸಂಬಂಧ ಸರ್ಕಾರ ರಚಿಸಿರುವ ಸಮಿತಿಯು ಈಗಾಗಲೇ ವರದಿ ಸಿದ್ಧಪಡಿಸಿದ್ದು, ವರದಿಯನ್ನು ಒಂದು ವಾರದೊಳಗಾಗಿ ಸರ್ಕಾರಕ್ಕೆ ಸಲ್ಲಿಸುವ ಭರವಸೆ ನೀಡಿರುವುದಕ್ಕೆ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸುತ್ತದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ 2006 ರಿಂದ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆ (ಎನ್‍ಪಿಎಸ್) ಹೋಗಲಾಡಿಸಿ, ಈ ಹಿಂದಿನ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವ ಸಂಬಂಧ, ಒಪಿಎಸ್ ಜಾರಿಗೊಳಿಸಿರುವ ದೇಶದ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು. ಸಮಿತಿಯು ಈ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನೌಕರರ ಸಂಘ ಒತ್ತಾಯಿಸುತ್ತಲೆ ಬಂದಿತ್ತು. ಕಳೆದ ಡಿ. 03 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ನೇತೃತ್ವದ ನಿಯೋಗವು ಎನ್‍ಪಿಎಸ್ ಸಮಿತಿಯ ಸದಸ್ಯರು ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ. ಎಂ.ಟಿ. ರೇಜು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಂದರ್ಭದಲ್ಲಿ, ಸಮಿತಿಯು ಈಗಾಗಲೆ ವರದಿ ಸಿದ್ಧಪಡಿಸಿದ್ದು, ಒಂದು ವಾರದೊಳಗೆ ಸಮಿತಿಯು ಸಭೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ಒಪಿಎಸ್ ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನೌಕರರ ಸಂಘವು ಮನವಿ ಮಾಡುತ್ತದೆ.
ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆ ಸೌಲಭ್ಯವನ್ನು ರಾಜ್ಯದ 18 ರಿಂದ 52 ವರ್ಷದೊಳಗಿನ ಮಹಿಳಾ ಸರ್ಕಾರಿ ನೌಕರರಿಗೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಇದನ್ನು ರಾಜ್ಯ ಸರ್ಕಾರಿ ನೌಕರರ ಸಂಘವು ಸ್ವಾಗತಿಸಿ, ಸರ್ಕಾರಕ್ಕೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಅಭಿನಂದನೆ ಸಲ್ಲಿಸುತ್ತದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪದಾಧಿಕಾರಿಗಳಾದ ಮಹೇಶ್ ಹೂಗಾರ, ಶ್ರೀಮಂತ ಪಟ್ಟೇದಾರ, ದರ್ಮರಾಯ ಜವಳಿ, ಚಂದ್ರಕಾಂತ ಏರಿ, ಎಂ.ಬಿ.ಪಾಟೀಲ, ಸುರೇಶ ವಗ್ಗೆ, ನಿಜಲಿಂಗಪ್ಪ ಕೋರಳ್ಳಿ, ಸಿದ್ದಲಿಂಗಯ್ಯ ಮಠಪತಿ ಅವರು ತಿಳಿಸಿದ್ದಾರೆ.

