ಚಿತ್ತಾಪುರ ಕಾನೂನು ಅರಿವು ಕಾರ್ಯಕ್ರಮ | ಜನತಾ ನ್ಯಾಯಾಲಯದಲ್ಲಿ ತ್ವರಿತ ನ್ಯಾಯದಾನ: ಕರಣ ಗುಜ್ಜರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಾರ್ವಜನಿಕ ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳ ತ್ವರಿತ ವಿಚಾರಣೆಗಾಗಿ ಜನತಾ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ ಎಂದು ಕಲಬುರಗಿ 4 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಕರಣ ಗುಜ್ಜರ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಚಿತ್ತಾಪುರ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಖಾಯಂ ಜನತಾ ನ್ಯಾಯಾಲಯದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ನ್ಯಾಯಾಲಯಗಳು ವಿವಾದಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸಹಾಯ ಮಾಡುತ್ತವೆ ಮತ್ತು ಯಾವುದೇ ಶುಲ್ಕವಿಲ್ಲದೆ ಸೇವೆಗಳನ್ನು ಒದಗಿಸುತ್ತವೆ. ಈ ಬಗ್ಗೆ ಈಗಾಗಲೇ ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿಯೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷ ಕಿಶನ್ ಬಿ. ಮಾಡಲಗಿ ಮಾತನಾಡಿ, ಖಾಯಂ ಜನತಾ ನ್ಯಾಯಾಲಯಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವು ಸಾರ್ವಜನಿಕರಿಗೆ ಈ ನ್ಯಾಯಾಲಯಗಳ ಬಗ್ಗೆ ಮಾಹಿತಿ ನೀಡಿ, ಅವುಗಳ ಸೌಲಭ್ಯಗಳನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಈ ಅಭಿಯಾನವು ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಜನತಾ ನ್ಯಾಯಾಲಯಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.
ಸರಕು-ಸಾಗಣೆ ಸೇವೆಯಲ್ಲಿನ ವ್ಯತ್ಯಯ, ದೂರವಾಣಿ ಸೇವೆ, ವಿದ್ಯುತ್, ನೀರು, ಬೆಳಕು, ಆಸ್ಪತ್ರೆ, ವಿಮೆ, ಬ್ಯಾಂಕಿಂಗ್, ಹಣಕಾಸು ಸಂಸ್ಥೆ, ಶಿಕ್ಷಣ ವಸತಿ ಮತ್ತು ರಿಯಲ್ ಏಸ್ಟೇಟ್ ವ್ಯಾಜ್ಯಗಳನ್ನು ಈ ಖಾಯಂ ಜನತಾ ನ್ಯಾಯಾಲಯಗಳ ಮೂಲಕವೇ ಬಗೆಹರಿಸಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕರದಳ್ಳಿ, ಉಪನ್ಯಾಸಕರಾಗಿ ನ್ಯಾಯವಾದಿ ಎ.ಎಂ.ಅವಂಟಿ ಖಾಯಂ ಜನತಾ ನ್ಯಾಯಾಲಯದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಅಪ್ಪರ ಜಿಲ್ಲಾ ಸರ್ಕಾರಿ ವಕೀಲರು ವಿ ಆರ್ ಕಾಂತ, ಸಹಾಯಕ ಸರ್ಕಾರಿ ಅಭಿಯೋಜಕರು ಅಂಜನಾದೇವಿ, ಆರ್, ನ್ಯಾಯವಾದಿಗಳಾದ ಚಂದ್ರಶೇಖರ ಅವಂಟಿ, ಗಂಗಾಧರ್ ಸಾಲಿಮಠ, ಎಸ್.ಪಿ.ಸಾತನೂರಕರ್, ಬಿ.ಬಿ.ದೊಡ್ಡಮನಿ, ಚಂದ್ರಶೇಖರ ಅಂಗಡಿ, ಪರಶುರಾಮ ಗಾಯಕವಾಡ, ಎಸ್.ಎನ್.ಪಾಟೀಲ, ಎಂ.ಟಿ ಅರುಣಕರ್, ಎಸ್.ಎನ್.ಜೋಶಿ, ಮಂಜುಳಾ ಸರಡಗಿ, ಬಸವರಾಜ ಸಿಂಪಿ, ಅಶ್ವಥ್ ರಾಠೋಡ, ಗಂಗಣ್ಣ ಹೊಸ್ಸುರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಭೀಮಶಪ್ಪ.ಎಲ್.ವಾಡಿ ಸ್ವಾಗತಿಸಿದರು, ಈಶ್ವರ ಅಳ್ಳೋಳ್ಳಿ ನಿರೂಪಿಸಿದರು, ಶರಣಗೌಡ ಎಂ.ಪಾಟೀಲ ವಂದಿಸಿದರು.

