ದಂಡೋತಿ ಮಂಗಗಳ ದಾಳಿಗೆ ಒಳಗಾದವರಿಗೆ ಪರಿಹಾರ ನೀಡಿ | ಮಂಗಗಳ ಹಾವಳಿ ತಡೆಹಿಡಿಯಲು ಕರವೇ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಅವುಗಳ ದಾಳಿಗೆ ತುತ್ತಾದ ಜನರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕೂಡಲೇ ಅವುಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಕರವೇ ನಾರಾಯಣಗೌಡ ಬಣ ಗ್ರಾಮ ಘಟಕದ ಅಧ್ಯಕ್ಷ ಮೈನೋದ್ದಿನ್ ತೋನಸನಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಮಂಗಗಳ ಉಪಟಳ ಹೆಚ್ಚಾಗಿದ್ದು ಗ್ರಾಮಸ್ಥರು ಭಯದ ಭೀತಿಯಲ್ಲಿದ್ದಾರೆ. ಹೊರಗಡೆ ಮಕ್ಕಳು ಹಾಗೂ ಮಹಿಳೆಯರಂತೂ ಆತಂಕದಲ್ಲಿಯೇ ಓಡಾಡುವಂತಾಗಿದೆ, ಈಗಾಗಲೇ ಮಂಗಗಳು ಏಳು ಜನರಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರಿಗೆ ಇನ್ನೂ ಯಾವುದೇ ಪರಿಹಾರ ನೀಡಿಲ್ಲ ಅರಣ್ಯಾಧಿಕಾರಿಗಳು ಮಾತ್ರ ಇಲ್ಲಿವರೆಗೂ ಒಂದು ಮಂಗ ಹಿಡಿದಿಲ್ಲ ಮಂಗಗಳು ಬೆಳಿಗ್ಗೆ ಬರುತ್ತವೆ ಆಗ ಅರಣ್ಯ ಸಿಬ್ಬಂದಿಗಳು ಇರುವುದಿಲ್ಲ. ಆದ್ದರಿಂದ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ವಲ್ಪ ಕಾಳಜಿ ವಹಿಸಿ ಮಂಗಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಮಂಗಗಳ ಹಾವಳಿಯಿಂದ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ ಹೀಗಾಗಿ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಮಂಗಗಳನ್ನು ಕೂಡಲೇ ಸೆರೆಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಣುಕಾ ಕಲಾಲ್ ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಜಗನ್ನಾಥ, ಪ್ರಧಾನ ಕಾರ್ಯದರ್ಶಿ ಶಾಂತಪ್ಪ, ರಿಯಾಜ್ ಯಾದಗಿರಿ, ಜೀವಣಪ್ಪ ಸೇರಿದಂತೆ ಮಹಿಳೆಯರು ಉಪಸ್ಥಿತರಿದ್ದರು.

