ಕರ್ನಾಟಕ ರಾಜ್ಯೋತ್ಸವ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ | ಕನ್ನಡತನ ಉಳಿಸುವುದು ಮನೆಯಿಂದಲೇ ಆಗಬೇಕಿದೆ: ಮುಡುಬಿ ಗುಂಡೇರಾವ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಕನ್ನಡತನ ಉಳಿಸುವ ಕೆಲಸ ಪ್ರತಿ ಮನೆಯಿಂದ ಆಗಬೇಕು ಎಂದು ಸಂಶೋಧನಾ ಸಾಹಿತಿ ಮುಡುಬಿ ಗುಂಡೇರಾವ್ ಸೇಡಂ ಹೇಳಿದರು.
ಪಟ್ಟಣದ ಪ್ರಜಾ ಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ಮನೆಯಿಂದಲೇ ಕನ್ನಡ ಕಟ್ಟುವಂತ ಕೆಲಸ ಆಗಬೇಕು, ಕನ್ನಡ ಭಾಷೆ ಬೆಳವಣಿಗೆಗೆ ನಾವೇನು ಮಾಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕನ್ನಡಕ್ಕೆ ಮುನ್ನುಡಿ ಬರೆದ ಕಲಬುರಗಿ, ಜಗತ್ತಿಗೆ ಜ್ಞಾನ ಕೊಟ್ಟಂತಹ ಚಿತ್ತಾಪುರ ಅಂತಹ ಜ್ಞಾನದ ಕಣಿಗಳು ಇಲ್ಲಿವೆ ಎಂದರು.
ಮನೆಗಳಲ್ಲಿ ಇಂಗ್ಲಿಷ್ ಮಾತನಾಡುವ ಅಭ್ಯಾಸ ಹೆಚ್ಚುತ್ತಿದೆ. ಇದು ಮುಂದಿನ ಪೀಳಿಗೆಗೆ ಕನ್ನಡ ಬೆಳೆಸಲು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ನಾವೆಲ್ಲರೂ ಕನ್ನಡ ಉಳಿಸಿ ಬೆಳೆಸಲು ವಿಶೇಷ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡ ನಾಡು ಅಥವಾ ಕರ್ನಾಟಕ ಉದಯವಾದ ಈ ದಿನವನ್ನು ಸಂಭ್ರಮಿಸುವ ಹಾಗೂ ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ, ಗೌರವಿಸುವ ಹಾಗೂ ಕನ್ನಡಾಭಿಮಾನವನ್ನು ಮೆರೆಯುವ ಉದ್ದೇಶದಿಂದ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲದ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ನಿಲ್ಲಬೇಕು. ಕನ್ನಡ ನಾಡು, ನುಡಿ ಕಟ್ಟುವ ಕೆಲಸ ನಿರಂತರವಾಗಿ ಆಗಬೇಕು ಎಂದು ಹೇಳಿದರು.
ಕಸಾಪ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ಮಲ್ಲಿಕಾರ್ಜುನ ಭೃಂಗಿಮಠ ದಂಡೋತಿ (ಸಾಹಿತಿಗಳು), ಈಶ್ವರಮ್ಮ ಯಾದವ್ ದಿಗ್ಗಾಂವ (ಕನ್ನಡಪರ ಹೋರಾಟಗಾರರು), ಸಂಗಣ್ಣ ಎಸ್. ಅಲ್ದಿ ಮಲಕೂಡ (ರಂಗಭೂಮಿ ಕಲಾವಿದರು), ಬುರ್ರಕಥೆ ಶಾಂತಮ್ಮ ರಾಮತೀರ್ಥ (ಜಾನಪದ ಕಲಾವಿದರು), ಪೋಮು ಪಾಂಡು ಚವ್ಹಾಣ ಚಿತ್ತಾಪುರ (ಜಾನಪದ ಕಲಾವಿದರು), ಶಿವುಕುಮಾರ ಸುಣಗಾರ ನಾಲವಾರ (ಕನ್ನಡಪರ ಹೋರಾಟಗಾರರು) ಹಾಗೂ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೂ ಸನ್ಮಾನಿಸಿ ಗೌರವಿಸಲಾಯಿತು.
ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಪಿಎಸ್ಐ ಮಂಜುನಾಥ ರೆಡ್ಡಿ, ಸಿಡಿಪಿಒ ಆರತಿ ತುಪ್ಪದ್, ಅಬಕಾರಿ ಪಿಎಸ್ಐ ವನಿತಾ ಸೀತಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಶಿವಶರಣಪ್ಪ ಮಂಠಾಳೆ, ಮಲ್ಲಿಕಾರ್ಜುನ ಸೇಡಂ, ನರಹರಿ ಕುಲಕರ್ಣಿ, ಚಂದರ್ ಚವ್ಹಾಣ, ಸುನೀಲ್ ಯನಗುಂಟಿಕರ್, ವಿಠಲ್ ರಾವ್, ಮೈನೋದ್ದಿನ್, ಮಹ್ಮದ್ ಸುಬಾನ್, ನಾಗರೆಡ್ಡಿ ಗೋಪಸೇನ್, ವೀರಸಂಗಪ್ಪ ಸುಲೇಗಾಂವ, ರಾಜಣ್ಣ ಕರದಾಳ, ಮಲ್ಲಿಕಾರ್ಜುನ ಅಲ್ಲೂರಕರ್, ಪಂಡಿತ್ ಶಿರವಾಟಿ ಸೇರಿದಂತೆ ಇತರರು ಇದ್ದರು. ಡಾ.ಶಂಕರ ಕಣ್ಣಿ ನಿರೂಪಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದಕ್ಕೂ ಮುನ್ನ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ದೇವಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕನ್ನಡದ ಬಾವುಟಗಳು ರಾರಾಜಿಸಿದವು, ಡಿಜೆ ಸೌಂಡ್ ಗೆ ವಿದ್ಯಾರ್ಥಿಗಳು, ಮುಖಂಡರು ಮತ್ತು ಅಧಿಕಾರಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

