ಚಿತ್ತಾಪುರ ಮಹಾದೇವಮ್ಮ ಬಿ. ಪಾಟೀಲ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ | ಸಮಯ ಪರಿಪಾಲನೆಯೇ ನಿಜವಾದ ಗಳಿಕೆ: ಸತ್ಯಂಪೇಟೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಮಯ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅತಿ ಅಗತ್ಯ. ವಿದ್ಯಾರ್ಥಿಗಳು ಸಮಯದ ಸದುಪಯೋಗಪಡಿಸಿಕೊಳ್ಳಬೇಕು. ಸಮಯ ಪರಿಪಾಲನೆಯೇ ನಿಜವಾದ ಗಳಿಕೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವು ಬದುಕಿನ ಸುವರ್ಣ ಕಾಲವಾಗಿದ್ದು, ನೈತಿಕ ಮೌಲ್ಯಗಳಿಲ್ಲದ ಅದಃಪತನಗೊಂಡಿರುವ ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು.
ಮೊಬೈಲ್ ಹಾವಳಿಯ ನಡುವೆಯೂ ಪುಸ್ತಕ ಓದುವ, ಬರೆಯುವ ಪರಿಪಾಠ ಹಾಕಿಕೊಳ್ಳಬೇಕು. ಪುಸ್ತಕ ಓದಿದ ಮಾತ್ರಕ್ಕೆ ಯಶಸ್ಸು ನಿಮ್ಮದಾಗುವುದಿಲ್ಲ. ಅದಕ್ಕೆ ಪ್ರಾಮಾಣಿಕ ಪ್ರಯತ್ನ ಬೇಕು. ಬದುಕನ್ನು ತಮಗನುಗುಣವಾಗುವಂತೆ ರೂಪಿಸಿಕೊಂಡವರೆ ಸಾಧಕರೆನಿಸಿಕೊಂಡಿದ್ದಾರೆ. ಶಿಕ್ಷಣ ಕೇವಲ ಅಂಕಗಳಿಕೆಗೆ ಸೀಮಿತ ಮಾಡಿಕೊಳ್ಳದೆ, ಮೌಲ್ಯವೃದ್ಧಿಗೆ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ವೈಜ್ಞನಿಕ ಸಂಶೋಧನ ಪರಿಷತ್ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ ಮಳಖೇಡ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬಾರದು. ಮೂಢನಂಬಿಕೆಯಿಂದ ಹೊರ ಬರಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯೆ ತ್ರಿವೇಣಿ ವಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ತಿಳಿಯುವ ಕುತೂಹಲ ಇರಬೇಕು. ಬಡವರಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವರಾಗಿ ಸಾಯುವುದು ತಪ್ಪು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ವಿಶ್ವಾರಾಧ್ಯ ವಿ.ಪಾಟೀಲ ಕರದಾಳ, ಪ್ರಾಚಾರ್ಯ ಸೋಮಶೇಖರ ಎಸ್. ಕಲಶೆಟ್ಟಿ, ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿದರು.
ವಿದ್ಯಾರ್ಥಿಗಳಾದ ಐಶ್ವರ್ಯ, ಲಕ್ಷ್ಮೀ, ಬಸವರಾಜ, ಸಂಜನ, ಭಾವನಾ, ನಳಿನಿ, ಡಿಶ್, ಗೋಳಿನಾಥ, ಮಧುವೇಣಿ, ಯುವರಾಜ್, ತಬಸುಂ, ಅಂಬಿಕಾ, ಕಾರ್ತಿಕ್ ಅನಿಸಿಕೆ ವ್ಯಕ್ತಪಡಿಸಿದರು. ಜ್ಯೋತಿ ಎಸ್, ಖಾಜಾ ಹುಸೇನ್, ಧರಣೇಂದ್ರ, ಅಖಿಲೇಶ ಇತರರಿದ್ದರು. ಶೈಲಜಾ ಮತ್ತು ಪ್ರೀತಿ ನಿರೂಪಿಸಿದರು.
“ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿ ಹಾಗೂ ಸಮಾಜಕ್ಕೆ ಉಪಯೋಗವಿದ್ದು, ಸರಳತೆ, ಸತ್ಯ, ಸಹಾಯ-ಸಹಕಾರ, ಗೌರವ, ವಿಶ್ವಾಸವೇ ಜೀವನದ ಸೂತ್ರವಾಗಬೇಕು”.-ನಾಗರೆಡ್ಡಿ ಪಾಟೀಲ ಕರದಾಳ, ಅಧ್ಯಕ್ಷರು, ಎಂ.ಬಿ.ಪಾಟೀಲ ಶಿಕ್ಷಣ ಸಂಸ್ಥೆ, ಚಿತ್ತಾಪುರ

