30 ವರ್ಷದ ಜೆಡಿಎಸ್ ಬಿಜೆಪಿ ದುರಾಡಳಿತಕ್ಕೆ ಬ್ರೇಕ್ | ಚಿತ್ತಾಪುರ ಪಿಎಲ್‌ಡಿ ಬ್ಯಾಂಕ್ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಭೀಮಣ್ಣ ಸಾಲಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ನೂತನ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ನ ನ್ಯೂನತೆಗಳು ಸರಿಪಡಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
30 ವರ್ಷಗಳ ಕಾಲ ಅಧಿಕಾರ ನಡೆಸಿದ ಜೆಡಿಎಸ್ ಮತ್ತು ಬಿಜೆಪಿ ಅವರು ರೈತರಿಗೆ ಯಾವುದೇ ಅನುಕೂಲ ಮಾಡಿಕೊಟ್ಪಿಲ್ಲ ಹಾಗೂ ಸೌಲಭ್ಯಗಳನ್ನು ಒದಗಿಸಿಲ್ಲ ಮತ್ತು ಬ್ಯಾಂಕ್ ನ ಅಭಿವೃದ್ಧಿ ಮಾಡಿಲ್ಲ ಹೀಗಾಗಿ ಬ್ಯಾಂಕ್ ಹೀನಾಯ ಸ್ಥಿತಿಯಲ್ಲಿದೆ ಎಂದು ಹೇಳಿದರು.
ಈ ಬಾರಿ ಪಿಎಲ್‌ಡಿ ಬ್ಯಾಂಕ್ ನ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲೇ ಬೇಕೆಂಬ ಉದ್ದೇಶ ಇತ್ತು, ಹೀಗಾಗಿ ಪಕ್ಷದ ಎಲ್ಲ ಮುಖಂಡರು ಒಗ್ಗೂಡಿ ಯೋಜನೆ ರೂಪಿಸಿ ಚುನಾವಣೆ ಮಾಡಿದ್ದರಿಂದ ಇದು ಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಇಲ್ಲಿ ಪಕ್ಷಕ್ಕಾಗಿ ನಿಷ್ಠೆಯಿಂದ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಸ್ಥಾನ ಮಾನ ಸಿಗುವುದು ಶತಸಿದ್ಧ. ನಾನು ಸುದೀರ್ಘ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತನಾಗಿ ಬ್ಲಾಕ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್ ಮಾತನಾಡಿ, ಪಿಎಲ್‌ಡಿ ಬ್ಯಾಂಕ್ ನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯುವ ಕೆಲಸ ಮಾಡಲಾಗುವುದು. ಈ ಹಿಂದೆ ಅಧಿಕಾರ ನಡೆಸಿದ ಜೆಡಿಎಸ್ ಮತ್ತು ಬಿಜೆಪಿ ಅಧ್ಯಕ್ಷರು ರೈತರಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ ಬರೀ ಅಧಿಕಾರ ನಡೆಸಲು ಪ್ರಯತ್ನ ಮಾಡಿದ್ದಾರೆ ಹೊರತು ರೈತರಿಗೆ ಟ್ರಾಕ್ಟರ್, ಹಿಟ್ಟಿನ ಗಿರಣಿ ಸೇರಿದಂತೆ ಸಾಲ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿಲ್ಲ. ಹೀಗಾಗಿ 30 ವರ್ಷಗಳ ದುರಾಡಳಿತಕ್ಕೆ ಈ ಬಾರಿ ಮತದಾರರು ಬ್ರೇಕ್ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ ಎಂದು ಹೇಳಿದರು. ಅಧ್ಯಕ್ಷ ಸ್ಥಾನಕ್ಕೆ ನಮ್ಮಲ್ಲಿ ಸಾಕಷ್ಟು ಪೈಪೋಟಿ ಇದ್ದರೂ ಸಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಆದೇಶದಂತೆ ಅವಿರೋಧ ಆಯ್ಕೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ಮುಖಂಡರಾದ ಶಿವರುದ್ರಪ್ಪ ಭೀಣ್ಣಿ, ಸುನೀಲ್ ದೊಡ್ಡಮನಿ, ಸಿದ್ದುಗೌಡ ಅಫಜಲಪುರ, ಓಂಕಾರ ರೇಷ್ಮಿ, ರವೀಂದ್ರ ರೆಡ್ಡಿ, ನಾಗಯ್ಯ ಗುತ್ತೇದಾರ, ರಾಮಲಿಂಗ ಬಾನರ್, ನಿಂಗಣ್ಣ ಹೆಗಲೇರಿ, ಎಂ.ಎ.ರಷೀದ್, ನಾಗು ಗೌಡ ಅಲ್ಲೂರ.ಕೆ, ದೇವು ಯಾಬಾಳ, ರಾಮು ಗಡ್ಡಿಮನಿ, ನಿಂಗಾರೆಡ್ಡಿ ಭೀಮನಳ್ಳಿ, ಶರಣು ಡೋಣಗಾಂವ, ಬಸವರಾಜ ಪೂಜಾರಿ, ಇಬ್ರಾಹಿಂ ನೈಕೋಡಿ, ಭೀಮಾಶಂಕರ ಹೋಳಿಕಟ್ಟಿ ಸೇರಿದಂತೆ ಇತರರು ಇದ್ದರು.
“ಚಿತ್ತಾಪುರ ಪಿಎಲ್‌ಡಿ ಬ್ಯಾಂಕ್ ನ ಅಧಿಕಾರ 30 ವರ್ಷಗಳ ಕಾಲ ಜೆಡಿಎಸ್ ಮತ್ತು ಬಿಜೆಪಿ ವಶದಲ್ಲಿತ್ತು, ಆದರೆ ಈ ಬಾರಿ ಕಾಂಗ್ರೆಸ್ ತೆಕ್ಕೆಗೆ ಬಂದಿದೆ ಇದರಿಂದ ಹೊಸ ಸಂಚಲನ ಗಾಳಿ ಬೀಸಿದೆ, ಸಚಿವ ಪ್ರಿಯಾಂಕ್ ಖರ್ಗೆ ಅವರ ಆದೇಶದಂತೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಇದಕ್ಕೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ಹಾಗೂ ಮುಖಂಡರಿಗೂ ಕೃತಜ್ಞತೆಗಳು”.-ರಮೇಶ ಮರಗೋಳ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ.

