ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ | ಗಣೇಶ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಿ: ಡಿವೈಎಸ್ಪಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗಣೇಶ ಪ್ರತಿಷ್ಠಾಪನೆ ಮಾಡುವವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಜೊತೆಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣೇಶ ಹಬ್ಬದ ಜೊತೆಗೆ ಈದ್ ಮಿಲಾದ್ ಹಬ್ಬವು ಒಟ್ಟಿಗೆ ಬಂದಿದೆ ಹೀಗಾಗಿ ಎಲ್ಲರೂ ಸಂತೋಷದಿಂದ ಆಚರಿಸಬೇಕು. ಆಯಾ ಇಲಾಖೆಗಳ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಬೇಕು, ಮತ್ತೊಬ್ಬರಿಗೆ ತೊಂದರೆ ಆಗದ ಹಾಗೆ ನಿಮ್ಮ ನಿಮ್ಮ ಚೌಕಟ್ಟಿನಲ್ಲಿ ಆಚರಿಸಬೇಕು ಆದಷ್ಟು ಎಲ್ಲರೂ ನೈಸರ್ಗಿಕವಾಗಿ, ಪರಿಸರಸ್ನೇಹಿ ಗಣಪತಿಗಳನ್ನು ಬಳಸುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಪಟ್ಟಣದ ಎಲ್ಲಾ ಗಣೇಶ ಉತ್ಸವ ಮಂಡಳಿಯವರು ವಿಸರ್ಜನೆ ಮಾಡುವ ಸಮಯದಲ್ಲಿ ರೈಲ್ವೆ ಸ್ಟೇಷನ್ ಹತ್ತಿರ ಸೇರಬೇಕು ಅಲ್ಲಿಂದ ಒಟ್ಟಿಗೆ ಮೆರವಣಿಗೆ ಪ್ರಾರಂಭ ಮಾಡಬೇಕು ಇದು ನೋಡುಗರಿಗೂ ಆಕರ್ಷಕವಾಗಿ ಕಾಣಲಿದೆ ಇದನ್ನು ಎಲ್ಲರೂ ಪಾಲಿಸಿ ಪೊಲೀಸ್ ಇಲಾಖೆಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಗಣೇಶ ಉತ್ಸವ ಸಂದರ್ಭದಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಜೆಸ್ಕಾಂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕೋರ್ಟ್ ಹಿಂದುಗಡೆ ಗಣೇಶ ವಿಸರ್ಜನೆ ಸ್ಥಳದಲ್ಲಿ ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಹಾಗೂ ರಸ್ತೆ ಸುಧಾರಣೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ಮಾತನಾಡಿ, ಹಬ್ಬಗಳ ಸಂದರ್ಭದಲ್ಲಿ ಯಾವುದೇ ವದಂತಿಗಳಿಗೆ ಕಿವಿಗೊಡದೆ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ ಚಿತ್ತಾಪುರ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಗಣೇಶ ಹಬ್ಬದ ಯಶಸ್ವಿಗೆ ಬೇಕಾದ ಪೊಲೀಸ್ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ ಗಣೇಶ ಚತುರ್ಥಿ ಜೊತೆಗೆ ಈದ್ ಮಿಲಾದ್ ಹಬ್ಬವು ಸಹ ಬಂದಿದೆ ಹೀಗಾಗಿ ಹಿಂದೂ ಮುಸ್ಲಿಂ ಎನ್ನದೆ ಎಲ್ಲರೂ ಸಹೋದರತೆಯ ಮನೋಭಾವದಿಂದ ಸಂಭ್ರಮದಿಂದ ಆಚರಿಸಬೇಕು ಎಂದು ಕಿವಿಮಾತು ಹೇಳಿದರು.
ಗಣೇಶ ಚತುರ್ಥಿ ಇದೇ ಆಗಸ್ಟ್ 27 ಪ್ರಾರಂಭವಾಗಿ ಸೆಪ್ಟೆಂಬರ್ 6 ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಎಲ್ಲಲ್ಲಿ ಗಣೇಶ ಕೂಡಿಸುತ್ತಿರೊ ಮೊದಲೇ ಮಾಹಿತಿ ನೀಡಬೇಕು ಅಂದಾಗ ಅಲ್ಲಿ ಪೊಲೀಸ್ ಮತ್ತು ಗೃಹ ರಕ್ಷಕರನ್ನು ನಿಯೋಜಿಸಲು ಅನುಕೂಲ ಆಗಲಿದೆ ಈ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳು ಚಾಚು ತಪ್ಪದೆ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಗಣೇಶ್ ಪ್ರತಿಷ್ಠಾಪನೆಗೆ ಬೇಕಾದ ಎಲ್ಲಾ ನಿಯಮಗಳನ್ನು ಪಾಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು. ಮೆರವಣಿಗೆ ಮಾರ್ಗದಲ್ಲಿ ಹಾಗೂ ಕೋರ್ಟ್ ಹಿಂದುಗಡೆ ಗಣೇಶ ವಿಸರ್ಜನೆ ಮಾಡುವ ಬಾವಿಯ ಹತ್ತಿರ ಸ್ವಚ್ಛತೆ ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗುವುದು ಎಂದರು. ಜೆಸ್ಕಾಂ ಶಾಖಾಧಿಕಾರಿ ಮೋಹನ್ ರಾಠೋಡ, ಪುರಸಭೆ ಮಾಜಿ ಅಧ್ಯಕ್ಷರಾದ ನಾಗರಾಜ ಭಂಕಲಗಿ, ಚಂದ್ರಶೇಖರ ಕಾಶಿ, ಸದಸ್ಯ ಜಗದೀಶ್ ಚವ್ಹಾಣ, ಬಾಬು ಕಾಶಿ ಅವರು ಮಾತನಾಡಿದರು.
ಕ್ರೈಂ ಪಿಎಸ್ಐ ಚಂದ್ರಾಮಪ್ಪ, ಪುರಸಭೆ ಅಧಿಕಾರಿ ಲೋಹಿತ್ ಕಟ್ಟಿ, ಅಗ್ನಿಶಾಮಕ ಅಧಿಕಾರಿ ಮಾಣಿಕ್, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಸದಸ್ಯರಾದ ಸಂತೋಷ ಚೌದರಿ, ಪ್ರಭು ಗಂಗಾಣಿ ಮುಖಂಡರಾದ ನಾಗರೆಡ್ಡಿ ಗೋಪಸೇನ್, ಗೋಪಾಲ ರಾಠೋಡ, ಎಂ.ಎ.ರಷೀದ್, ಮಲ್ಲಿಕಾರ್ಜುನ ಪೂಜಾರಿ, ನಿಂಗಾರೆಡ್ಡಿ ಭೀಮನಳ್ಳಿ, ನಾಗಪ್ಪ ಕಲ್ಲಕ್, ನಾಗರಾಜ ರೇಷ್ಮಿ, ಸುಭಾಷ್ ಜಾಧವ, ಮಹೇಶ್ ಕಾಶಿ, ಖಾಜಾ ಬಾದಲ್, ಸಾಬಣ್ಣ ಹೌಳಿಕಟ್ಟಿ, ಮಹಾಂತೇಶ್ ಬೊಮ್ಮನಳ್ಳಿ, ಚಂದ್ರು ಕಾಳಗಿ, ರಾಜೇಶ್ ಹೋಳಿಕಟ್ಟಿ, ಬಸವರಾಜ ಮುಡಬೂಳಕರ್, ದತ್ತು ಜಾನೆ ಸೇರಿದಂತೆ ಇತರರು ಇದ್ದರು.
ಪಿಎಸ್ಐ ಶ್ರೀಶೈಲ್ ಅಂಬಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಎಸ್ಐ ಬಾಬುರಾವ್ ನಿರೂಪಿಸಿ ವಂದಿಸಿದರು.

