ಚಿತ್ತಾಪುರ ಪುರಸಭೆ ಬಜೆಟ್ ಪೂರ್ವಭಾವಿ ಸಭೆ, ಸ್ವಚ್ಛ ಹಾಗೂ ಸುಂದರ ಪಟ್ಟಣಕ್ಕಾಗಿ ಎಲ್ಲರೂ ಕೈಜೋಡಿಸಿ: ಅನ್ನಪೂರ್ಣ ಕಲ್ಲಕ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸ್ವಚ್ಛ ಹಾಗೂ ಸುಂದರ ಪಟ್ಟಣಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಕರೆ ನೀಡಿದರು
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಷ್ಟು ದಿನ ಪುರಸಭೆಯ ಅಧಿಕಾರ ಇರಲಿಲ್ಲ ಹೀಗಾಗಿ ಅನೇಕ ಸಮಸ್ಯೆಗಳು ಇದ್ದವು ಈಗ ಅಧಿಕಾರಕ್ಕೆ ಬಂದಿದ್ದು ಬರುವ ದಿನಗಳಲ್ಲಿ ಪಟ್ಟಣಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ವಿಠಲ್ ಕಟ್ಟಿಮನಿ ಮಾತನಾಡಿ, ಪಟ್ಟಣದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಮಾಡಬೇಕು, ಜಾಫರ್ ಗಂಜ್, ಕಾಶಿ ಗಲ್ಲಿ ಸೇರಿದಂತೆ ಇತರೆ ಏರಿಯಾಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು, ಪಟ್ಟಣದ ಎಲ್ಲಾ ಗೋಡೆಗಳ ಮೇಲೆ ಐತಿಹಾಸಿಕ ಸ್ಥಳಗಳ ಕಲೆ ಮಾಡಿಸಬೇಕು ಹಾಗೂ ಸಿದ್ದರಾಮೇಶ್ವರ ವೃತ್ತದ ನಾಮಕರಣ ಮಾಡಬೇಕು ಮತ್ತು ಚಿತಾಗಾರದ ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.
ಕಾಶಿನಾಥ ಗುತ್ತೇದಾರ ಮಾತನಾಡಿ, ಪಟ್ಟಣದಲ್ಲಿ ಜನಸಂದಣಿ ಇರುವ ಸ್ಥಳಗಳಾದ ಲಾಡ್ಜಿಂಗ್ ಕ್ರಾಸ್, ಭುವನೇಶ್ವರಿ ವೃತ್ತ ಹಾಗೂ ನಾಗಾವಿ ವೃತ್ತಿಗಳಲ್ಲಿ ಮಿನಿ ಬಸ್ ನಿಲ್ದಾಣ, ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಹಾಗೂ ಪಟ್ಟಣದಲ್ಲಿ ಇರುವ ಎರಿಯಾಗಳ, ಗಲ್ಲಿಗಳ ಹಾಗೂ ನಗರಗಳ ಹೆಸರುಗಳ ನಾಮಫಲಕಗಳು ಅಳವಡಿಸಿಕೊಳ್ಳಬೇಕು ಮತ್ತು ಉದ್ಯಾನವನಗಳ ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು.
ವಿಶ್ವನಾಥ ಕಾಶಿ, ಜಗದೇವ ಕುಂಬಾರ ಅವರು ಮಾತನಾಡಿ, ಆಶ್ರಯ ಕಾಲೋನಿಯಲ್ಲಿ ಶೌಚಾಲಯ, ಚರಂಡಿ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದರು. ಮಹ್ಮದ್ ಇಬ್ರಾಹಿಂ ಮಾತನಾಡಿ, ಅಂಗವಿಕಲರ ಅಭಿವೃದ್ಧಿಗಾಗಿ ಶೇ.5 ಅನುದಾನ ಸರಿಯಾದ ರೀತಿಯಲ್ಲಿ ಉಪಯೋಗವಾಗಬೇಕು. ಯರಗಲ್ ರಸ್ತೆಯಲ್ಲಿ ಚಿತ್ತಾಷಾವಲಿ ದರ್ಗಾದ ದ್ವಾರ ಬಾಗಿಲು ಹಾಕಬೇಕು ಎಂದು ಮನವಿ ಮಾಡಿದರು.
ಖಾಜಾ ಮಾತನಾಡಿ, ಅಟೋ ನಗರ ನಿರ್ಮಾಣ ಕಾರ್ಯ ನೆನೆಗುದಿಯಲ್ಲಿದೆ ಹೀಗಾಗಿ ಕೂಡಲೇ ಮೇಕಾನಿಕ್ ಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಕನಕದಾಸ ಮಹಿಳಾ ಸಂಘದವರು ಮಾತನಾಡಿ, ಪೆದ್ದು ಮಠದ ಹತ್ತಿರ ಚರಂಡಿ, ಶೌಚಾಲಯ ನಿರ್ಮಾಣ, ವಿದ್ಯುತ್ ಕಂಬಗಳು ಸರಿಪಡಿಸಬೇಕೆಂದು ಆಗ್ರಹಿಸಿದರು. ಶ್ರೀ ಸಾಯಿ ಮಹಿಳಾ ಸಂಘದವರು ಮಾತನಾಡಿ, ಚೌಡಮ್ಮ ಗುಡಿ, ಆಸ್ಸಾರ ಮೊಹಲ್ಲಾದಲ್ಲಿ ಕುಡಿಯುವ ನೀರು, ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಅಶ್ವಥ್ ರಾಠೋಡ ಮಾತನಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೌಚಾಲಯಗಳು ನಿರ್ಮಾಣ ಮಾಡಬೇಕು, ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕು, ರಸ್ತೆಗಳ ಸುಧಾರಣೆ ಮಾಡಬೇಕು, ಎಸ್ಸಿ ಎಸ್ಟಿ ಜನಾಂಗದವರಿಗೆ ಭೂಮಿ ಖರೀದಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಬಜೆಟ್ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾದ ಎಲ್ಲ ವಿಷಯಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಗಣಿಸಿ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಪಟ್ಟಣದ ಸೌಂದರ್ಯಕರಣ, ಕುಡಿಯುವ ನೀರು, ಶೌಚಾಲಯ ಮತ್ತು ವಿದ್ಯುತ್ ಮತ್ತು ಸ್ವಚ್ಛತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅನುದಾನ ಮೀಸಲಿಡಲಾಗುವುದು ಎಂದರು.
ಪುರಸಭೆ ಅಧಿಕಾರಿಗಳಾದ ಕ್ರಾಂತಿದೇವಿ, ರಾಕೇಶ, ಮುಖಂಡರಾದ ಅಹ್ಮದ್ ಸೇಟ್, ಶಿವರಾಮ್ ಚವ್ಹಾಣ, ಜಗದೀಶ್ ಪವಾರ, ರಜಾಕ್ ಸೇರಿದಂತೆ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

