ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಮಾತ್ರೆಗಳ ಕೊರತೆ, ರೋಗಿಗಳು ಪರದಾಟ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ ಮಾತ್ರೆಗಳ ಕೊರತೆಯಿಂದ ಬಡ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾದರೂ ಸಹ ಯಾವೊಬ್ಬ ಅಧಿಕಾರಿಯೂ ಹಾಗೂ ಜನಪ್ರತಿನಿಧಿಗಳು ಇತ್ತಕಡೆ ಗಮನ ಹರಿಸದೇ ಇರುವುದಕ್ಕೆ ರೋಗಿಗಳು ಹಿಡಿಶಾಪ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಔಷಧಿ ಮಾತ್ರೆಗಳ ಕೊರತೆಯಿಂದ ಬಡ ರೋಗಿಗಳು ಅಲ್ಲಿಂದಿಲ್ಲಿಗೆ ಚೀಟಿ ಹಿಡಿದುಕೊಂಡು ಅಲೆದಾಡುತ್ತಿದ್ದ ಸನ್ನಿವೇಶ ಗುರುವಾರ ಕಂಡುಬಂತು.
ಆಸ್ಪತ್ರೆಯಲ್ಲಿ ಸ್ಟಾಕ್ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಯದೇ ವೈದ್ಯರು ರೋಗಿಗಳಿಗೆ ಚೀಟಿ ಬರೆಯುತ್ತಿದ್ದಾರೆ, ಆ ಚೀಟಿ ತೆಗೆದುಕೊಂಡು ಔಷಧಿ ವಿತರಣೆ ಕೌಂಟರ್ ಗೆ ಹೋದಾಗ ಅಲ್ಲಿಯ ಸಿಬ್ಬಂದಿ ಈ ಔಷಧಿ ಮಾತ್ರೆಗಳು ಇಲ್ಲ ಹೊರಗಡೆ ತೆಗೆದುಕೊಳ್ಳಿ ಎಂದು ನೇರವಾಗಿ ಹೇಳುತ್ತಿದ್ದಾರೆ ಹೀಗಾದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಸಂತೋಷ ಮೊಗಲಾ ಪ್ರಶ್ನಿಸಿದ್ದಾರೆ.
ಈ ಕುರಿತು ಕರ್ತವ್ಯದಲ್ಲಿದ್ದ ಡಾ.ದಶರಥ್ ಅವರಿಗೆ ವಿಚಾರಿಸಿದರೆ, ಆಸ್ಪತ್ರೆಯಲ್ಲಿ ಔಷಧಿ ಮಾತ್ರೆಗಳ ಸ್ಟಾಕ್ ಇಲ್ಲದಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಉಡಾಫೆ ಉತ್ತರ ನೀಡಿದರು.
ಆಸ್ಪತ್ರೆಯಲ್ಲಿ ಔಷಧ ಸಿಗದೇ ಇರುವುದರಿಂದ, ರೋಗಿಗಳು ಹೊರಗಡೆ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಔಷಧ ಕೊಂಡುಕೊಳ್ಳಬೇಕಾಗಿದೆ. ಇದರಿಂದ ಬಡ ಕುಟುಂಬದವರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ರೋಗಿಗಳಿಗೆ ದೊಡ್ಡ ಸಮಸ್ಯೆಯಾಗಿದ್ದು. ಔಷಧ ಕೊರತೆ ಕಂಡುಬಂದಿರುವುದು ಬಡ ರೋಗಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ‘ಇಲ್ಲಿ ಔಷಧ ಸಿಗುತ್ತಿಲ್ಲ, ನಾವು ಬಡವರು ಮೆಡಿಕಲ್ ಗೆ ಹೋಗಿ ಖರೀದಿಸುವಷ್ಟು ಹಣ ಇಲ್ಲ’ ಎಂಬ ಗೋಳು ಸರ್ಕಾರಿ ಆಸ್ಪತ್ರೆಗೆ ಔಷಧಿ ಕೊಳ್ಳಲು ಬರುವ ಪ್ರತಿಯೊಬ್ಬ ಬಡ ರೋಗಿಯ ಬಾಯಲ್ಲಿ ಕೇಳಿ ಬರುತ್ತಿದೆ.
ವೃದ್ಧರು, ಮಕ್ಕಳು, ಬಡ ರೋಗಿಗಳು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಪಡೆಯಲು ಪರದಾಡುತ್ತಿದ್ದಾರೆ. ಅಗತ್ಯ ಔಷಧಗಳು ಇಲ್ಲದೆ ಜನರು ಪರದಾಡುವಂತಾಗಿದೆ. ಒಂದು ಔಷಧ ನೀಡಿದ್ರೆ ಇನ್ನೊಂದು ಔಷಧ ನೀಡುತ್ತಿಲ್ಲ, ನಮ್ಮ ಹತ್ರ ಹಣ ಇಲ್ಲ, ಮೆಡಿಕಲ್ ಶಾಪ್ ನಲ್ಲಿ ಖರೀದಿಸಿ ಎನ್ನುತ್ತಿದ್ದಾರೆ ಎಂದು ರೋಗಿಗಳು ತಮ್ಮ ಅಳಲನ್ನು ನಾಗಾವಿ ಎಕ್ಸಪ್ರೆಸ್ ಎದುರು ತೋಡಿಕೊಂಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಅಲ್ಲಿನ ವೈದ್ಯರು ಔಷಧಗಳನ್ನು ಹೊರಗಡೆ ಕೊಂಡುಕೊಳ್ಳುವಂತೆ ಚೀಟಿ ಬರೆದುಕೊಡಬಾರದು ಎಂದು ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ ಇಲ್ಲಿ ಮಾತ್ರ ಔಷಧಿ ಮಾತ್ರೆಗಳ ಕೊರತೆ ಎದ್ದು ಕಾಣುತ್ತಿದೆ, ಇದರಿಂದ ಇಲ್ಲಿನ ವೈದ್ಯರು ಔಷಧಗಳನ್ನು ಹೊರಗಡೆ ಕೊಂಡುಕೊಳ್ಳುವಂತೆ ಚೀಟಿ ಬರೆದುಕೊಡುತ್ತಿದ್ದಾರೆ ಇದು ವಿಪರ್ಯಾಸದ ಸಂಗತಿ.
ಈ ಕೂಡಲೇ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಆಸ್ಪತ್ರೆಯಲ್ಲಿನ ಸಮಸ್ಯೆ ಕಡೆ ಗಮನ ಹರಿಸಿ ಅಗತ್ಯ ಔಷಧಿ ಮಾತ್ರೆಗಳ ವ್ಯವಸ್ಥೆ ಮಾಡಿಸಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

