ದಂಡೋತಿ ಗ್ರಾಮದಲ್ಲಿ ಮುಂದುವರಿದ ಮಂಗಗಳ ದಾಳಿ, ಭಯದ ಭೀತಿಯಲ್ಲಿ ಗ್ರಾಮಸ್ಥರು | ಮಂಗಗಳನ್ನು ಸೆರೆ ಹಿಡಿಯಲು ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಂಗವೊಂದು ದಾಳಿ ಮಾಡಿ ನಾಲ್ಕು ಜನರಿಗೆ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಾಸುವ ಮುನ್ನವೇ ಮತ್ತೇ ಮಂಗಳವಾರ ಮಹಿಳೆಯ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.
ಕಳೆದ ಗುರುವಾರ ಮಂಗನ ದಾಳಿಗೆ ಗ್ರಾಮದ ನೀಲಮ್ಮ ದತ್ತು ಹೂಗಾರ, ವೀರಶೆಟ್ಟಿ ಪ್ರಕಾಶ, ಮಹ್ಮದ್ ಫಾರೂಕ್ ಗೌಸ್ ಪಟೇಲ್, ಮಾಲಮ್ಮ ಚಿಮ್ಮನ್ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮತ್ತೇ ಮಂಗಳವಾರ ಬೆಳಗ್ಗೆ ಮನೆಯ ಮುಂದಿನ ಬಾವಿಗೆ ನೀರು ತರಲು ಹೋದಾಗ ರೇಷ್ಮಾ ಮಶಾಕ್ ಪಾಟಕದೋರ್ ಎಂಬ ಮಹಿಳೆ ಮೇಲೆ ಏಕಾಏಕಿ ಮಂಗವೊಂದು ದಾಳಿ ಮಾಡಿ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಈ ಮಹಿಳೆ ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ್ದಾರೆ ಹಾಗೂ ನಾಲ್ಕು ಕಡೆ ಮಂಕಿ ಡ್ರಾಪ್ ಕೇಜ್ ಇಟ್ಟಿದ್ದಾರೆ ಆದರೂ ಇಲ್ಲಿವರೆಗೆ ಮಂಗಗಳು ಮಾತ್ರ ಸೆರೆ ಸಿಕ್ಕಿಲ್ಲ ಇದರಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ.
ಹಿಂದೊಮ್ಮೆ ಕೊಂಚೂರ ಗ್ರಾಮದಲ್ಲಿ ಇದೇ ರೀತಿ ಮಂಗಗಳ ಸಮಸ್ಯೆ ಹೆಚ್ಚಾಗಿತ್ತು ಆಗ 100-200 ಮಂಗಗಳನ್ನು ಸೆರೆ ಹಿಡಿಯಲಾಗಿದೆ. ಹೀಗಾಗಿ ದಂಡೋತಿಯಲ್ಲಿಯೂ ಸೆರೆ ಹಿಡಿಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಆದರೆ ಗ್ರಾಮಸ್ಥರು ಸಹಕರಿಸುತ್ತಿಲ್ಲ ಇದರಿಂದ ತೊಂದರೆಯಾಗುತ್ತಿದೆ ಎಂದು ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಗಳ ಉಪಟಳದಿಂದ ಗ್ರಾಮಸ್ಥರು ಭಯದ ಭೀತಿಯಲ್ಲಿದ್ದಾರೆ. ಮಕ್ಕಳು, ಮಹಿಳೆಯರು ಹೊರಗಡೆ ಹೋಗುವುದಕ್ಕೆ ಭಯ ಪಡುತ್ತಿದ್ದಾರೆ. ಮನೆಯ ಮುಂದಿನ ಬಾವಿಗೆ ನೀರು ತರುವುದಕ್ಕೆ ಹೋದಾಗ ಮಂಗವೊಂದು ದಿಢೀರನೆ ದಾಳಿ ಮಾಡಿ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಮಾಡಿದೆ ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ಮಂಗಗಳ ಕಿರಿಕಿರಿ ಆಗುತ್ತಿದ್ಜರೂ ಸಹ ಅರಣ್ಯ ಇಲಾಖೆ ಮಾತ್ರ ಇಲ್ಲಿವರೆಗೂ ಮಂಗಗಳನ್ನು ಸೆರೆ ಹಿಡಿಯುವ ಕೆಲಸ ಮಾಡುತ್ತಿಲ್ಲ ಹೀಗಾಗಿ ಗ್ರಾಮಸ್ಥರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ ಆದ್ದರಿಂದ ಕೂಡಲೇ ಮಂಗಗಳನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥ ಭೀಮಾಶಂಕರ ಆಗ್ರಹಿಸಿದ್ದಾರೆ.
“ದಂಡೋತಿಯಲ್ಲಿ ಮಂಗಗಳನ್ನು ಸೆರೆ ಹಿಡಿಯಲು ಎರಡು ತಂಡಗಳು ಮಾಡಲಾಗಿದ್ದು ನಾಲ್ಕು ಕಡೆ ಮಂಕಿ ಡ್ರಾಪ್ ಕೇಜ್ ಇಡಲಾಗಿದೆ. ಇಲ್ಲಿ ಗ್ರಾಮಸ್ಥರ ಸಹಕಾರ ಮುಖ್ಯ, ಈಗಾಗಲೇ ಈ ಕುರಿತು ಪಂಚಾಯಿತಿ ವತಿಯಿಂದ ಡೊಂಗುರ ಹಾಕಿಸಲು ತಿಳಿಸಲಾಗಿದೆ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೂ ತರಲಾಗಿದೆ. ಮಂಗಗಳ ದಾಳಿಗೆ ತುತ್ತಾದವರನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರದ ವತಿಯಿಂದ ಸಿಗುವ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು”.-ವಿಜಯಕುಮಾರ್ ಬಡಿಗೇರ್ ಅರಣ್ಯಾಧಿಕಾರಿ ಚಿತ್ತಾಪುರ.

