ಟಿಸಿ ಅಳವಡಿಸಿ ಬೆಳಕಿನ ಭಾಗ್ಯ ಕಲ್ಪಿಸಿ | ಚಿತ್ತಾಪುರ ಜೆಸ್ಕಾಂ ವಿರುದ್ಧ ಸ್ಟೇಷನ್ ತಾಂಡಾ ನಿವಾಸಿಗಳ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಳೆ ಗಾಳಿಗೆ ಸುಟ್ಟ ಟಿಸಿ ದುರಸ್ತಿ ಮಾಡದ ಅಥವಾ ಹೊಸ ಟಿಸಿ ಅಳವಡಿಸದೇ ನಿರ್ಲಕ್ಷ್ಯ ವಹಿಸಿದ್ದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಟೇಷನ್ ತಾಂಡಾದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ ವಾರ್ಡ್ ನಂ.8 ರ ವ್ಯಾಪ್ತಿಯ ಸ್ಟೇಷನ್ ತಾಂಡಾದಲ್ಲಿ ವಿದ್ಯುತ್ ಪರಿವರ್ತಕ (ಟಿಸಿ) ಬುಧವಾರ ನಸುಕಿನ ಜಾವದಲ್ಲಿ ಸುರಿದ ಮಳೆಯಿಂದಾಗಿ ಸುಟ್ಟು ಹೋಗಿದೆ, ಇದನ್ನು ಸರಿಪಡಿಸಬೇಕು ಎಂದು ತಾಂಡಾದ ನಿವಾಸಿಗಳು ಬೆಳಿಗ್ಗೆಯಿಂದ ಜೆಸ್ಕಾಂ ಗೆ ಕಾಲ್ ಮಾಡುತ್ತಿದ್ದರೂ ಯಾವುದೇ ಸ್ಪಂದನೆ ಇಲ್ಲ ಮೊದಲನೆಯದಾಗಿ ಪೋನ್ ಕಾಲೇ ಸ್ವೀಕರಿಸುತ್ತಿಲ್ಲ ಇದರಿಂದಾಗಿ ದಿನಪೂರ್ತಿ ವಿದ್ಯುತ್ ಇಲ್ಲದೆ ಇಲ್ಲಿನ ಕುಟುಂಬಗಳು ಪರದಾಡುವಂತಾಗಿದೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿತು ಎಂದು ಅಮೃತ ದೊರೆ ತಿಳಿಸಿದ್ದಾರೆ.
ಸಂಜೆ ಕಾಲ್ ಸ್ವೀಕರಿಸಿದ ಜೆಸ್ಕಾಂ ಎಸ್ಓ ಅವಾಚ್ಯವಾಗಿ ಮಾತನಾಡಿದ್ದಾರೆ, ಸಮಸ್ಯೆ ಬಗ್ಗೆ ಹೇಳಿದರೆ ನಮ್ಮನ್ನೇ ಗದರಿಸಿದ್ದಾರೆ. ಟಿಸಿ ಕಲಬುರಗಿಯಿಂದ ಬರಬೇಕು ಬಂದಾಗ ಹಾಕುತ್ತೇವೆ ರಾತ್ರಿ 11 ಗಂಟೆ ಆಗಬಹುದು ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇದರಿಂದ ಈಗ ರಾತ್ರಿ ಕತ್ತಲಲ್ಲಿಯೇ ಸಮಯ ಕಳೆಯುವಂತ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಮೃತ ದೊರೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈಗಲಾದರೂ ಜೆಸ್ಕಾಂ ಅಧಿಕಾರಿಗಳು ಕೂಡಲೇ ಟಿಸಿ ಅಳವಡಿಸಿ ಸಾರ್ವಜನಿಕರಿಗೆ ಬೆಳಕಿನ ಭಾಗ್ಯ ಕಲ್ಪಿಸಿ ಅನುಕೂಲ ಮಾಡಿಕೊಡುವ ಕಡೆ ಗಮನ ಹರಿಸುವರೋ ಎಂಬುದು ಕಾದುನೋಡಬೇಕಿದೆ.

