Oplus_0

ಕಾಂಗ್ರೆಸ್ ತೊರೆದು ನೂರಾರು ಯುವಕರು ಜೆಡಿಎಸ್ ಸೇರ್ಪಡೆ | ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಣ್ಣನ ಅಗತ್ಯವಿದೆ: ಕಂದಕೂರ ಅಭಿಮತ

ನಾಗಾವಿ ಎಕ್ಸಪ್ರೆಸ್ 

ಗುರಮಠಕಲ್: ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಣ್ಣನ ಅಗತ್ಯವಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯ ಪ್ರಕ್ರಿಯೆ ಸಧ್ಯ ಟ್ರೈಲರ್ ಇದ್ದು ಮುಂದೆ ಪಿಕ್ಚರ್ ಅಭಿ ಬಾಕಿ ಹೈ ಎಂದು ಹೇಳಿದರು.

ನಮ್ಮ ಅಭಿವೃದ್ಧಿ ಕಾರ್ಯಗಳನ್ನು‌ ಮೆಚ್ಚಿ ಇಂದು ನೂರಾರು ಜನ ಪಕ್ಷಕ್ಕೆ ಬರುತ್ತಿದ್ದಾರೆ. ಅವರ ಕಷ್ಟ, ಸುಖಗಳಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ, ಅದನ್ನು‌‌ ಖಂಡಿತವಾಗಿಯೂ ಮಾಡುತ್ತೇನೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಭದ್ರವಾಗಿ ಬೇರೂರಿದ್ದು ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಹತ್ತಿಕುಣಿ ನಾಲಾ ಆಧುನೀಕರಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿನ‌ ಸರ್ಕಾರ ಗುರಮಠಕಲ್ ಕ್ಷೇತ್ರಕ್ಕೆ ಮೂರು ವರ್ಷಗಳಿಂದ ಕುಡಿಯುವ ನೀರು ಕೊಟ್ಟಿಲ್ಲ ಇನ್ನೂ ಕೋಟಿಗಟ್ಟಲೇ ಅನುದಾನ ಕೊಡುತ್ತಾರಾ? ಎಂದು ಪ್ರಶ್ನಿಸಿದರು.

ಕ್ಷೇತ್ರದ ಕುಡಿಯುವ ನೀರಿನ ವಿಷಯದಲ್ಲಿ ಅಧಿವೇಶನದಲ್ಲಿ ಸತತ 8 ಬಾರಿ ಪ್ರಶ್ನೆ ಮಾಡಿದ್ದೇನೆ. ಆದಕ್ಕೆ ಇದುವರೆಗೂ ಉತ್ತರವಿಲ್ಲ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನನಗೆ ಯಾರು ಸಹಕಾರ ಕೊಟ್ಟಿದ್ದಾರೆ, ಯಾರು ಅಡ್ಡಿ ಮಾಡಿದ್ದಾರೆ ಎಲ್ಲ ಗೊತ್ತಿದೆ. ಅದನ್ನು ನಿಮ್ಮೂರಿಗೆ ಬಂದು ಹೇಳುವೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭೀಮಶಪ್ಪ ಗುಡಸೆ ಮಾತನಾಡಿ, ಮತಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು ನಮ್ಮ ಶಾಸಕ ಶರಣಗೌಡ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ವಿಧಾನಸಭೆಯ ಪ್ರತಿ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಅಭಿವೃದ್ಧಿಗೆ ಮುನ್ನಡೆ ಬರೆಯಲು ಹೋರಾಟ ನಡೆಸುತ್ತಿದ್ದಾರೆ.‌ ಇಂಥ ನಾಯಕರ ಕೈ ಬಲಪಡಿಸಲು ಯುವಕರು ಮುಂದಾಗಬೇಕು ಎಂದರು.

ಮುಖಂಡ ನರಸಪ್ಪ ಕವಡೆ ಮಾತನಾಡಿ, ಜೆಡಿಎಸ್ ಪಕ್ಷದ ಬಗ್ಗೆ ನಮ್ಮ ನಾಯಕರ ಬಗ್ಗೆ ಕಾಂಗ್ರೆಸ್ ನಾಯಕರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ನಮ್ಮ ಶಾಸಕರು ಕಿಂಚಿತ್ತಾದರೂ ಅಕ್ರಮ ಹಾದಿ ಹಿಡಿದಿದ್ದಾರೆ ದಾಖಲೆ ನೀಡಿ ಇಲ್ಲವೇ ಬಹಿರಂಗವಾಗಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ರೈತರ ಭೂಮಿ ವಶ ಪಡಿಸಿಕೊಳ್ಳಲು ಮುಂದಾದಾಗ ನಮ್ಮ ಹಿಂದಿನ ಶಾಸಕರಾಗಿದ್ದ ದಿ.ನಾಗನಗೌಡ ಕಂದಕೂರು ಅವರು ಉರಿ ಬಿಸಿಲು ಲೆಕ್ಕಿಸದೆ ಹೋರಾಟ ನಡೆಸಿದ್ದರು.‌ ಅಂದು ಕಾಂಗ್ರೆಸ್ ನವರು ಮೌನಕ್ಕೆ ಶರಣಾಗಿದ್ದರು. ಇಂದು ಸರ್ಕಾರ ಭೂ ಸ್ವಾಧೀನ ಕೈ ಬಿಡಲು ಕಾರಣ ನಮ್ಮ ಶಾಸಕ ಶರಣಗೌಡ ಅವರ ಸತತ ಹೋರಾಟವೇ ಕಾರಣ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಾಸ್ತಾವಿಕ ಮಾತನಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸಿರಡ್ಡಿ ಅನಪುರ ಮೊದಲು ಕನ್ನಡವನ್ನು ಶುದ್ಧವಾಗಿ ಮಾತನಾಡಲು ಕಲಿಯಲಿ ಎಂದು ವ್ಯಂಗ್ಯವಾಡಿದ ಅವರು, ನಮ್ಮ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಜೆಡಿಎಸ್ ಕಾರ್ಯಕರ್ತರು ಸುಮ್ಮನೆ ಕೂಡುವುದಿಲ್ಲ ಎಂದು ಗುಡುಗಿದರು.

ಕ್ಷೇತ್ರದ ಯರಗೋಳ, ಹೋರುಂಚಾ, ಬದ್ದೆಪಲ್ಲಿ, ತುರಕನದೊಡ್ಡಿ, ಹಿರೇನೂರ, ಸಾವೂರು, ಗ್ರಾಮ ಸೈದಾಪುರದ ಯುವಕರು ಜೆಡಿಎಸ್ ಸೇರ್ಪಡೆಗೊಂಡರು.

ಬ್ಲಾಕ್ ಅಧ್ಯಕ್ಷ ಶರಣು ಆವಂಟಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಯಡ್ಡಳ್ಳಿ, ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಹಳಿಮನಿ ಕೌಳೂರು, ಅಜಯರಡ್ಡಿ ಯಲ್ಹೇರಿ, ಬಸ್ಸಣ್ಣ ದೇವರಳ್ಳಿ, ಶರಣು ಆವಂಟಿ, ತಾಪಂ ಮಾಜಿ ಅಧ್ಯಕ್ಷ ಈಶ್ವರ ನಾಯಕ್ , ನರಸಪ್ಪ ಕವಡೆ, ವೆಂಕಟೇಶ ಕಡದ್, ಗುರುನಾಥರಡ್ಡಿ ಸೈದಾಪುರ, ಶರಣಯ್ಯಾ ಸ್ಚಾಮಿ ಅರಿಕೇರಾ, ಚಂದ್ರುಗೌಡ ಸೈದಾಪುರ, ಬಸವರಾಜ ಕಣೇಕಲ್,ಜಯೇಂದ್ರ ಚೌವ್ಹಾಣ್ ಇದ್ದರು.

ನಮ್ಮ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ, ನಮ್ಮ ಶಾಸಕರು 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸಿರಡ್ಡಿ ಅನಪುರ ಆರೋಪ ಮಾಡುತ್ತಿದ್ದಾರೆ. ಅವರಿಗೆ ನಿಜವಾಗಿಯೂ ನೈತಿಕತೆ ಇದ್ದರೆ, ಯಾವ ದೇವರ ಬಳಿಯಾದರೂ ಬರಲಿ ನಾನು ಅಣೆ, ಪ್ರಮಾಣ ಮಾಡಲು ಸಿದ್ಧ.‌ ನೀವು ಬರುತ್ತೀರಾ? ಎಂದು ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಖಾರವಾಗಿ ಸವಾಲು ಹಾಕಿದರು.

ಬಸಿರಡ್ಡಿ ಅವರೇ ನೀವು ಎಷ್ಟು ಲಂಚ ತಿನ್ನುತ್ತಿದ್ದೀರಿ ಎಂಬ ಅಂಕಿ-ಅಂಶ ನಮ್ಮ ಬಳಿ ಇದೆ. ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಅಲ್ಲ, ಎಟೆಂಟು ಬಾಗಿಲುಗಳಾಗಿವೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಾಬುರಾವ್ ಚಿಂಚನಸೂರ್ ಸ್ಪರ್ಧೆ ಮಾಡಿದರೆ ಮಾತ್ರ ನಿಮ್ಮ ಗೌರವ ಉಳಿಯುತ್ತದೆ. ‌ಇಲ್ಲದಿದ್ದರೆ, ಕಾಂಗ್ರೆಸ್ ನ ಡೆಪಾಸಿಟ್ ಜಪ್ತಿಯಾಗು ಪಕ್ಷವನ್ನು ಟಾರ್ಚ್ ಹಾಕಿ ಹುಡುಕುವ ಸ್ಥಿತಿ ಎದುರಾಗುತ್ತದೆ ಎಂದು ಭವಿಷ್ಯ ನುಡಿದರು.

 “ಕ್ಷೇತ್ರದ ಯುವಕರು ಮತ್ತೊಬ್ಬರ ಮಾತು ಕೇಳಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ.‌ ನಾನು ಶಾಸಕನಾಗಿ ಕ್ಷೇತ್ರದ ಜನ ತಲೆ ತಗ್ಗಿಸುವ ಕೆಲಸ ನಮ್ಮ‌ ದೊಡ್ಡಪ್ಪ‌ ಆಗಲಿ, ನಮ್ಮ ತಂದೆಯವರಾಗಲಿ‌‌ ಮತ್ತು ನಾನಾಗಲಿ‌‌ ಯಾವತ್ತೂ ಮಾಡುವುದಿಲ್ಲ”.- ಶರಣಗೌಡ ಕಂದಕೂರ ಶಾಸಕರು.

 “ಹಿಂದುಳಿದ ಕೋಲಿ ಸಮಾಜದ ಬಾಬುರಾವ್ ಚಿಂಚನಸೂರ ಅವರಿಗೆ ಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸ್ಥಳೀಯ ಕಾಂಗ್ರೆಸ್ ನಾಯಕರು ಸಿದ್ದರಿಲ್ಲ ಎಂಬುದು ಆ ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ”.-ಸುಭಾಶ್ಚಂದ್ರ ಕಟಕಟಿ ಜೆಡಿಎಸ್ ಜಿಲ್ಲಾಧ್ಯಕ್ಷರು.

Spread the love

Leave a Reply

Your email address will not be published. Required fields are marked *

error: Content is protected !!