ಹುಟ್ಟು ಹಬ್ಬ ಆಚರಿಸಕೊಳ್ಳದಿರಲು ನಿರ್ಧಾರ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಹಲವು ವರ್ಷಗಳಿಂದ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹಾಗೆಯೇ, ಈ ಬಾರಿಯೂ ನನ್ನ ಹುಟ್ಟುಹಬ್ಬದ ಆಚರಣೆಯಿಂದ ದೂರವೇ ಇರಲು ನಿರ್ಧರಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಹುಟ್ಟುಹಬ್ಬ ಎಲ್ಲರ ಪಾಲಿಗೆ ಸಂಭ್ರಮದ ದಿನ. ಪ್ರತಿ ವರ್ಷವೂ ಹೊಸ ಅನುಭವ, ಹೊಸ ಕಲಿಕೆಯನ್ನು, ನಮ್ಮ ಜೀವನದ ಮಜಲನ್ನು, ಸಾರ್ಥಕತೆಯನ್ನು ಒರೆಗೆ ಹಚ್ಚುವ ಹಾಗೂ ನಮ್ಮವರೊಂದಿಗೆ ಆನಂದಿಸುವ ದಿನವೂ ಹೌದು. ಹಿಂದಿನಂತೆ ಈ ವರ್ಷ ಕೂಡ ನಿಮ್ಮ ಸಹಕಾರ, ಪ್ರೀತಿ ಹಾಗೂ ತಾಳ್ಮೆ ನನ್ನೊಂದಿಗೆ ಹೀಗೇ ಇರಲಿ ಎಂದು ಆಶಿಸಿದ್ದಾರೆ.
ಈಗಾಗಲೇ ಅನೇಕ ಆತ್ಮೀಯರು ಹುಟ್ಟುಹಬ್ಬವನ್ನು ಆಚರಿಸಲು ತಯಾರಿ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ದಯಮಾಡಿ ಇಂತಹ ಆಚರಣೆಗಳಿಗೆ ನಿಮ್ಮ ಶ್ರಮ ಹಾಕಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಪ್ರೀತಿ, ಹಾರೈಕೆ, ಅಭಿಮಾನವೇ ನನಗೆ ಸಮ್ಮಾನ ಹಾಗೂ ಸಂಭ್ರಮ ಎಂದಿದ್ದಾರೆ.
ಹುಟ್ಟುಹಬ್ಬದ ಆಚರಣೆಯನ್ನು ಮಾಡಲೇಬೇಕು ಎಂದು ನೀವು ನಿರ್ಧರಿಸಿದ್ದರೆ, ನಿಮ್ಮ ಪರಿಶ್ರಮವು ಬಡ ಜನರಿಗೆ, ಶೋಷಿತರಿಗೆ, ಸಂಕಷ್ಟದಲ್ಲಿರುವ ಜನರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ರೀತಿಯಲ್ಲಿ ಹೆಚ್ಚು ಅರ್ಥಪೂರ್ಣವಾಗಿ ವಿನಿಯೋಗವಾಗಲಿ ಎಂದು ಮನವಿ ಮಾಡಿದ್ದಾರೆ. ನಿಮ್ಮ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಮತ್ತು ನಮ್ಮ ಕುಟುಂಬ ಸದಾ ಚಿರಋಣಿಯಾಗಿರಲಿದೆ ಎಂದು ತಿಳಿಸಿದ್ದಾರೆ.
