Oplus_131072

10 ಎಕರೆ ಕಬ್ಬು ಕಟಾವು ಮಾಡಲು 50 ಸಾವಿರ ಖರ್ಚು, ರೈತ ಬೆಳೆದ ಬೆಳಗಿಲ್ಲ ಕಿಮ್ಮತ್ತು | ಲಗಾನಿ ಎಂಬ ಹೆಸರಲ್ಲಿ ನಡೆಯುತ್ತಿರುವ ರೈತರ ಶೋಷಣೆ ನಿಲ್ಲಿಸುವಂತೆ ಗಂಗಾಣಿ ಆಗ್ರಹ

ನಾಗಾವಿ ಎಕ್ಸಪ್ರೆಸ್

ಕಾಳಗಿ: 10 ಎಕರೆ ಕಬ್ಬು ಕಟಾವು ಮಾಡಲು 50 ಸಾವಿರ ಖರ್ಚು ತಗಲುತ್ತದೆ ಹೀಗಾಗಿ ರೈತ ಬೆಳೆದ ಬೆಳೆಗೆ ಕಿಮ್ಮತ್ತು ಇಲ್ಲದಂತಾಗಿದೆ, ಲಗಾನಿ ಎಂಬ ಹೆಸರಲ್ಲಿ ನಡೆಯುತ್ತಿರುವ ರೈತರ ಶೋಷಣೆ ನಿಲ್ಲಿಸಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಆಗ್ರಹಿಸಿದ್ದಾರೆ.

ಕಬ್ಬಿನ ಗದ್ದೆಗಳಲ್ಲಿ ‘ಲಗಾನಿ’ ಎಂಬ ಹೆಸರಿನಲ್ಲಿ ನಡೆಯುತ್ತಿರುವುದು ಹಗಲು ದರೋಡೆ. ಇದು ಇಡೀ ರೈತ ಹೋರಾಟದ ಒಗ್ಗಟ್ಟನ್ನೇ ಪ್ರಶ್ನಿಸುವಂತಹ ಆಂತರಿಕ ಮತ್ತು ಬಾಹ್ಯ ಶೋಷಣೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏನಿದು ಲಗಾನಿ ಎಂಬ ಸುಲಿಗೆ?

ಕಬ್ಬು ಕಟಾವಿಗೆ ಸಿದ್ಧವಾದಾಗ, ರೈತನಿಗೆ ಸಮಯದ ಒತ್ತಡವಿರುತ್ತದೆ. ಪ್ರತಿ ದಿನ ಗದ್ದೆಯಲ್ಲಿ ನಿಂತ ಕಬ್ಬು ತನ್ನ ತೂಕವನ್ನು (ತೂಕ) ಕಳೆದುಕೊಳ್ಳುತ್ತಾ ಹೋಗುತ್ತದೆ. ತೂಕ ಕಡಿಮೆಯಾದರೆ, ರೈತನ ಆದಾಯವೂ ಕಡಿಮೆ. ಇದೇ ರೈತನ ಅಸಹಾಯಕತೆಯನ್ನು ಕೊಯ್ತಾ ಗ್ಯಾಂಗ್‌ಗಳು ತಮ್ಮ ಅಸ್ತ್ರವಾಗಿಸಿಕೊಳ್ಳುತ್ತವೆ.

ಈಗಲೇ ಕಟಾವು ಮಾಡಬೇಕೇ ಹಾಗಾದರೆ ಲಗಾನಿ ಕೊಡು. ಈ ಲಗಾನಿ ಎಂದರೆ ಮುಂಗಡ ಹಣವಲ್ಲ, ಇದು ಲಂಚ. ಇದು ಬೆದರಿಕೆ. ರೈತನು ತನ್ನದೇ ಬೆಳೆಯನ್ನು, ತಾನು ಬೆಳೆದ ಕಬ್ಬನ್ನು ಕಟಾವು ಮಾಡಲು, ಈ ಗ್ಯಾಂಗ್ ಮಾಲೀಕನಿಗೆ ಪ್ರತಿ ಟ್ರ್ಯಾಕ್ಟರ್‌ಗೆ ಇಂತಿಷ್ಟು ಎಂದು ಹೆಚ್ಚುವರಿ ಹಣವನ್ನು ಕೊಟ್ಟರಷ್ಟೇ ಆತನ ಗದ್ದೆಗೆ ಕೂಲಿ ಆಳುಗಳು ಮತ್ತು ಟ್ರ್ಯಾಕ್ಟರ್ ಕಾಲಿಡುತ್ತವೆ. ಇಲ್ಲದಿದ್ದರೆ, ಆತನ ಕಬ್ಬು ಗದ್ದೆಯಲ್ಲೇ ಒಣಗಿ, ನಷ್ಟವಾಗುತ್ತದೆ.

ಈ ಲಗಾನಿ ಸುಲಿಗೆಯ ಹಿಂದಿನ ಅಸಲಿ ಮೋಸವನ್ನು ಅರಿತುಕೊಂಡರೆ ಆಘಾತವಾಗುತ್ತದೆ. ಈ ಶೋಷಣೆಯ ಜಾಲವು ಬಹು ಹಂತಗಳಲ್ಲಿ ಹರಡಿಕೊಂಡಿದೆ ರೈತ ಗುತ್ತಿಗೆದಾರ ವಿಪರ್ಯಾಸವೆಂದರೆ, ಈ ಹೆಚ್ಚಿನ ‘ಕೊಯ್ತಾ ಗ್ಯಾಂಗ್’ಗಳ ಮಾಲೀಕರು, ಕಾರ್ಮಿಕರನ್ನು ಪೂರೈಸುವ ಕಾಂಟ್ರಾಕ್ಟರ್‌ಗಳು ಬೇರೆ ಯಾರೂ ಅಲ್ಲ, ಅವರೂ ರೈತರೇ ಆಗಿರುತ್ತಾರೆ. ಒಬ್ಬ ರೈತನ ನೋವು ಇನ್ನೊಬ್ಬ ರೈತನಿಗೆ ಅರ್ಥವಾಗಬೇಕಿತ್ತು. ಆದರೆ ಇಲ್ಲಿ, ಒಬ್ಬ ರೈತನೇ ಇನ್ನೊಬ್ಬ ರೈತನನ್ನು ಸುಲಿಯುವ ದಲ್ಲಾಳಿಯಾಗಿ ಬದಲಾಗಿದ್ದಾನೆ.

ಟ್ರ್ಯಾಕ್ಟರ್ ಮಾಲೀಕರ ದಬ್ಬಾಳಿಕೆ ಕಟಾವು ಗ್ಯಾಂಗ್ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಮಾಲೀಕರು ಕಾರ್ಖಾನೆಯಿಂದ ಸಾರಿಗೆ ಹಣ ಪಡೆದರೂ, ಈ ಟ್ರ್ಯಾಕ್ಟರ್ ಮಾಲೀಕರು ಕೂಡ ನಮ್ಮ ಟ್ರ್ಯಾಕ್ಟರ್ ನಿಮ್ಮ ಹೊಲಕ್ಕೆ ಬರಬೇಕಾದರೆ ಎಂದು ರೈತನಿಂದ ಪ್ರತ್ಯೇಕ ‘ಲಗಾನಿ’ ವಸೂಲಿ ಮಾಡುವ ಪ್ರಕರಣಗಳು ವ್ಯಾಪಕವಾಗಿವೆ.

ಮಹಾರಾಷ್ಟ್ರದ ಗ್ಯಾಂಗ್‌ಗಳು:

ಕರ್ನಾಟಕದ ಜಿಲ್ಲೆಗಳಲ್ಲಿ, ಕಟಾವು ಮಾಡಲು ಬರುವ ಬಹುತೇಕ ಗ್ಯಾಂಗ್‌ಗಳು ನೆರೆಯ ಮಹಾರಾಷ್ಟ್ರದಿಂದ ಬಂದಿರುತ್ತವೆ. ಇವರು ಸ್ಥಳೀಯ ರೈತರ ಅಸಹಾಯಕತೆಯನ್ನು ಇನ್ನಷ್ಟು ದುರುಪಯೋಗಪಡಿಸಿಕೊಳ್ಳುತ್ತಾರೆ. ಇವರಿಗೆ ಸ್ಥಳೀಯ ಭಾಷೆಯ, ಸಂಬಂಧದ ಯಾವುದೇ ಮುಲಾಜಿರುವುದಿಲ್ಲ. ಲಗಾನಿ ಕೊಟ್ಟರೆ ಕಟಾವು, ಇಲ್ಲದಿದ್ದರೆ ನಾವು ಮುಂದಿನ ಹೊಲಕ್ಕೆ ಎಂಬ ನೇರ ಬೆದರಿಕೆ ಹಾಕಿ, ರೈತರಿಂದ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡುತ್ತಾರೆ.

ಅಸಲಿ ಮೋಸ ಡಬಲ್ ಡೀಲಿಂಗ್: 

ಈ ಎಲ್ಲಾ ಗ್ಯಾಂಗ್‌ಗಳು (ಸ್ಥಳೀಯ ರೈತರದ್ದೇ ಆಗಿರಲಿ, ಮಹಾರಾಷ್ಟ್ರದ್ದೇ ಆಗಿರಲಿ) ಮಾಡುವ ಅಸಲಿ ವಂಚನೆ ಡಬಲ್ ಡೀಲಿಂಗ್. ಸಕ್ಕರೆ ಕಾರ್ಖಾನೆಗಳು ಈಗಾಗಲೇ ರೈತರಿಂದ ಸಾಗಾಣಿಕೆ ವೆಚ್ಚ ಕಡಿತಗೊಳಿಸುರುತ್ತವೆ ಹಾಗೂ ಅದನ್ನೇ ಕಟಾವು ಮತ್ತು ಸಾರಿಗೆ ವೆಚ್ಚವೆಂದು ಟ್ರ್ಯಾಕ್ಟರ್ ಮತ್ತು ಗ್ಯಾಂಗ್ ಮಾಲೀಕರಿಗೆ ಪಾವತಿಸುತ್ತವೆ. ಪ್ರತಿ ಟನ್ ಕಬ್ಬು ಕಟಾವು ಮಾಡಲು ಮತ್ತು ಕಾರ್ಖಾನೆಗೆ ಸಾಗಿಸಲು ಪ್ರತಿ ಕಿಲೋಮೀಟರ್‌ಗೆ ಇಂತಿಷ್ಟು ಎಂದು ನಿಗದಿತ ದರವನ್ನು ಕಾರ್ಖಾನೆಗಳು ನೇರವಾಗಿ ಈ ಗ್ಯಾಂಗ್ ಮಾಲೀಕರಿಗೆ ನೀಡುತ್ತವೆ. ಹಾಗಾದರೆ, ಕಾರ್ಖಾನೆಯಿಂದ ತಮ್ಮ ಕೆಲಸಕ್ಕೆ ಅಧಿಕೃತವಾಗಿ ಹಣ ಪಡೆಯುವ ಈ ಗ್ಯಾಂಗ್‌ಗಳು, ರೈತರಿಂದ ‘ಲಗಾನಿ’ ಹೆಸರಿನಲ್ಲಿ ಮತ್ತೆ ಹಣ ವಸೂಲಿ ಮಾಡುವುದೇಕೆ? ಇದು ಅಕ್ರಮ, ಅನೈತಿಕ, ಮತ್ತು ರೈತ ಸಮುದಾಯದ ಒಳಗೇ ನಡೆಯುತ್ತಿರುವ ದ್ರೋಹ ಎಂದಿದ್ದಾರೆ.

ನಾವು ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತ ಹಾಗೂ ಹೆದ್ದಾರಿಗಳಲ್ಲಿ ನಿಂತು, ಕಾರ್ಖಾನೆ ಮಾಲೀಕರ-ರಾಜಕಾರಣಿಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತೇವೆ. ಆದರೆ, ನಮ್ಮ ಗದ್ದೆಯ ಮಟ್ಟದಲ್ಲಿ, ನಮ್ಮದೇ ರೈತ ಬಂಧು, ಹೊರಗಿನ ಟ್ರ್ಯಾಕ್ಟರ್ ಮಾಲೀಕ, ಅಥವಾ ಮಹಾರಾಷ್ಟ್ರದ ಗ್ಯಾಂಗ್ ಇವರೆಲ್ಲಾ ಸೇರಿ ಇನ್ನೊಬ್ಬ ರೈತನಿಗೆ ‘ಲಗಾನಿ’ಗಾಗಿ ಮೋಸ ಮಾಡುತ್ತಿರುವಾಗ, ನಮ್ಮ ಒಗ್ಗಟ್ಟು ಎಲ್ಲಿ ಉಳಿಯುತ್ತದೆ ಮಾಲೀಕ-ರಾಜಕಾರಣಿ’ಯು ಹೊರಗಿನ ಶತ್ರು. ಆದರೆ ಲಗಾನಿ’ ವಸೂಲಿ ಮಾಡುವ ಈ ಗುತ್ತಿಗೆದಾರರು ನಮ್ಮ ವ್ಯವಸ್ಥೆಯೊಳಗಿನ ಶತ್ರುಗಳು. ಹೊರಗಿನ ಶತ್ರುವಿನ ವಿರುದ್ಧ ಹೋರಾಡುವ ಮೊದಲು, ನಮ್ಮ ಆಂತರಿಕ ಶೋಷಣೆಯನ್ನು, ಈ ‘ಲಗಾನಿ’ ಎಂಬ ಹಗಲು ದರೋಡೆಯನ್ನು ನಿಲ್ಲಿಸಬೇಕಿದೆ. ರೈತರು ಮೊದಲು ಈ ಅಕ್ರಮ ಸುಲಿಗೆಯ ವಿರುದ್ಧ ಒಗ್ಗೂಡಬೇಕು. ಇಲ್ಲದಿದ್ದರೆ, ನಾವು ಕಾರ್ಖಾನೆ ಮಾಲೀಕರ ವಿರುದ್ಧ ಗೆದ್ದರೂ, ನಮ್ಮವರೇ ಆದ ‘ಲಗಾನಿ’ಭತಾ’ ಮಾಲೀಕರ ಬಳಿ ಸೋತುಹೋಗುತ್ತೇವೆ. ಕೊನೆಯದಾಗಿ ಒಂದು ಮಾತು ಹೇಳುತ್ತೇನೆ ಯಾವ ರೈತನ ಹೊಲಕ್ಕೆ ಕಬ್ಬು ಕಟಾವು ಮಾಡಲು ಬಂದ ಟೋಳಿಯಾಗಲಿ ಅಥವಾ ಕಬ್ಬು ಕಟಾವು ಮಸೀನ ಆಗಲಿ ಯಾರಿಗೂ ಒಂದು ರೂಪಾಯಿ ಕೊಡದೆ ತಾವು ಕಬ್ಬು ಕಟಾವ್ ಮಾಡಿಸಿಕೊಳ್ಳಬೇಕು. ಒಂದು ವೇಳೆ ತಮ್ಮ ಕಬ್ಬು ಕಟಾವು ಬಂದಂತ ಟೋಳಿಗಳಾಗಲಿ ಅಥವಾ ಕಬ್ಬು ಕಟಾವ ಮಾಡುವ ಮಸೀನಿನ ಮಾಲೀಕನಾಗಲಿ ತಮ್ಮ ಕಬ್ಬು ಕಟಾವು ನಾವು ಮಾಡೋದಿಲ್ಲ ಎಂದು ಹೇಳಿದರೆ ಅಂತವರ ವಿರುದ್ಧ ಕಾರ್ಖಾನೆಗೆ ದೂರು ನೀಡಿ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್ ಗೋಣಗಿ ಅವರು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!