Oplus_0

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ಸಂವಿಧಾನ ವಿರೋಧಿಯಾಗಿದ್ದು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಎಚ್’ಪಿ ರಾಜ್ಯಪಾಲರಿಗೆ ಪತ್ರ

ನಾಗಾವಿ ಎಕ್ಸಪ್ರೆಸ್

ಸೇಡಂ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಅಶಯಕ್ಕೆ ಹಾಗೂ ರಾಜ್ಯದ ಮತ್ತು ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿರುವುದರಿಂದ ಅದನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಸರ್ವ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ನೇತೃತ್ವದಲ್ಲಿ ಮುಖಂಡರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಮಾತನಾಡಿ, ಕರ್ನಾಟಕ ಸರ್ಕಾರ ತನ್ನ ಕ್ಯಾಬಿನೆಟ್ ಸಭೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿಯನ್ನು ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ ಎಂದು ಮಾಧ್ಯಮದ ಮೂಲಕ ತಿಳಿದು ಬಂದಿದ್ದು ಇದನ್ನು  ತೀವ್ರವಾಗಿ ವಿರೋಧಿಸುತ್ತಿದ್ದು ತಿದ್ದುಪಡಿ ಮಾಡುವುದನ್ನು ತಕ್ಷಣ ಕೈಬಿಡಬೇಕೆಂದು ಸಂಬಂಧಪಟ್ಟವರೆಲ್ಲರಿಗೂ  ತಿಳಿಸಬೇಕೆಂದು ಹಾಗೂ ಸದರಿ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಗೋವುಗಳು ಅತ್ಯಂತ ಹಿಂಸಾತ್ಮಕವಾಗಿ ಒಂದೇ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಜಾನುವಾರುಗಳನ್ನು ಕ್ರೂರವಾಗಿ ಒಂದರ ಮೇಲೊಂದು ಹಾಕಿ ದುಡ್ಡಿನ ಆಸೆಗಾಗಿ ಸಾಗಾಟ ಮಾಡುತ್ತಿರುವುದು ಕಂಡುಬರುತಿದ್ದು, ಮೇಲ್ಕಾಣಿಸಿದ ಕಾಯಿದೆ 2021 ರಲ್ಲಿ ಜಾರಿಯಾದ ನಂತರ ಈ ಕ್ರೂರತೆ ಒಂದಷ್ಟು ಕಡಿಮೆ ಆದದ್ದು ಕಂಡುಬಂದಿದೆ. ಆದರೆ ಇನ್ನೂ ಕೂಡ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಕಾರಣ ಹಲವು ಕಡೆ ಹಣದ ಆಸೆಗಾಗಿ ವಾಹನದ ಮಾಲಕರು ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುವುದು ಕಂಡುಬಂದಿದೆ. ಇದನ್ನು ನಿಯಂತ್ರಿಸಬೇಕಾದರೆ ಸದರಿ ಕಾಯಿದೆ ಬಿಗಿಯಾದ ರೀತಿಯಲ್ಲಿ ಜಾರಿಗೊಳಿಸಬೇಕಾಗಿದೆ, ಆದರೆ ಇದಕ್ಕೆ ವಿರುದ್ಧವಾಗಿ ಕಟುಕರಿಗೆ ಹಾಗೂ ಅಕ್ರಮ ಗೋ ಕಳ್ಳರಿಗೆ ಸುಲಭವಾಗಿ ಸಾಗಾಟ ಮಾಡಲು ಅನುಕೂಲವಾಗುವಂತೆ ವಶಪಡಿಸಿದ ವಾಹನ ತಾತ್ಕಾಲಿಕ ಹಸ್ತಾಂತರಕ್ಕೆ ಬ್ಯಾಂಕ್ ಗ್ಯಾರಂಟಿ ಕೊಡುವುದನ್ನು ಕೈ ಬಿಡುವ ಬಗ್ಗೆ ಕಾಯಿದೆಯನ್ನು ತಿದ್ದುಪಡಿ ಮಾಡದಂತೆ ಕ್ರಮ ಕೈಗೊಂಡು ರಾಜ್ಯದಲ್ಲಿ ಕಾನೂನು ರೀತಿಯಲ್ಲಿ ಮಾತ್ರ ಜಾನುವಾರುಗಳನ್ನ ಸಾಗಾಟ ಮಾಡುವಂತೆ ಕಾನೂನು ಜಾಗೃತಿ ಮಾಡಬೇಕು ಎಂದು ಹೇಳಿದರು.

ಈ ಕಾಯಿದೆ ಕೇವಲ ಜಾನುವಾರು ವಧೆ ನಿಷೇಧಿಸುವ ಉದ್ದೇಶ ಮಾತ್ರವಲ್ಲದೆ ಸಂರಕ್ಷಣಾ ಕಾಯಿದೆಯೂ ಆಗಿರುತ್ತದೆ. ಅಂದರೆ ಮುಖ್ಯವಾಗಿ ಸಾಗಾಟದ ಸಮಯದಲ್ಲಿ ಜಾನುವಾರುಗಳಿಗೆ ವಾಹನದ ಮಾಲಕರು ಮಾಡುವ ಕ್ರೂರ ಸಾಗಾಟ ನಿಲ್ಲಿಸಿ ಸಾಗಾಟದಲ್ಲಿ ಜಾನುವಾರುಗಳಿಗೆ ಆಗಬಹುದಾದಂತ ಹಿಂಸೆ, ಗಾಯಗಳಿಂದ ಸಂರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿದ್ದು ಅದಕ್ಕಾಗಿ ಜಾನುವಾರು ಸಾಗಾಟ ನಿಯಮಾವಳಿಗಳನ್ನು ವಾಹನ ಮಾಲಕರೇ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮನೋಭಾವ ಸೃಷ್ಟಿಯಾಗಲು ಬಿಗಿಯಾದಂತ ಕಾನೂನು ರಚಿಸಲಾಗಿತ್ತು. ಈಗ ಕಾನೂನು ದುರ್ಬಲಗೊಳಿಸುವ ಮೂಲಕ ವಾಹನ ಸಾಗಾಟಗಾರರಿಗೆ, ಗೋ ಹಂತಕರಿಗೆ “ನೀವು ಹೇಗೆ ಬೇಕಾದರೂ ಸಾಗಾಟ ಮಾಡಬಹುದು ನಾವು ನಿಮ್ಮ ಜೊತೆಗಿದ್ದೇವೆ”ಎಂದು ಕಾಂಗ್ರೆಸ್ ಸರ್ಕಾರವು ಅವರಿಗೆ ನಿರ್ಭಯವನ್ನು ಕೊಟ್ಟಂತಾಗಿದೆ. ತನ್ಮೂಲಕ ಗೋವುಗುಗಳಿಗೆ ಹಿಂಸೆ ಹಾಗೂ ಅವುಗಳ ಹತ್ಯೆ ಇನ್ನು ಮುಂದೆ ಹೆಚ್ಚಾಗಲಿದೆ. ಇದು ಹಿಂದುಗಳಿಗೆ ಪೂಜನೀಯವಾಗಿರತಕ್ಕಂತಹ ಗೋವುಗಳಿಗೆ ನೋವು, ಹಿಂಸೆ ಮಾಡಲು ಕಾಂಗ್ರೆಸ್ ಸರ್ಕಾರ ಅನುಕೂಲ ಮಾಡಿಕೊಟ್ಟಂತಾಗಿದ್ದು, ಇದರಿಂದಾಗಿ ಹಿಂದುಗಳ ಆಕ್ರೋಶ ಹೆಚ್ಚಾಗಿ ರಾಜ್ಯದಲ್ಲಿ ಅಶಾಂತಿ ಅರಾಜಕತೆಗೆ ಕಾರಣವಾಗ ಬಹುದು ಎಂದು ತಿಳಿಸಿದ್ದಾರೆ.

ಪ್ರಾಂತ ಸಹ ಸೇವಾ ಪ್ರಮುಖರು ಹಾಗೂ ವಿಭಾಗ ಕಾರ್ಯದರ್ಶಿ ಅಂಬರೀಶ್ ಸುಲೆಗಾಂವ ಮಾತನಾಡಿ, ಗೋಕಳ್ಳ ಸಾಗಾಟಗಾರರಿಗೆ ಈ ತಿದ್ದುಪಡಿಯಿಂದ ನಿರ್ಭಯತ್ವ ಕೊಟ್ಟಂತಾಗಿರುವುದು ಸಂವಿಧಾನ ವಿರೋಧಿಯಾಗಿದೆ. ಸಂವಿಧಾನದ ಆರ್ಟಿಕಲ್ 51ಎ ಇದರ ಪ್ರಕಾರ ಜೀವಿಗಳಿಗೆ ಕರುಣೆ ತೋರಿಸುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯವಾಗಿದೆ. ಇದು ಕರ್ನಾಟಕ ಸರ್ಕಾರಕ್ಕೂ ಅನ್ವಯವಾಗುತ್ತದೆ. ಸದರಿ ತಿದ್ದುಪಡಿ ಸಂವಿಧಾನದ ಈ ಆಶಯಕ್ಕೆ ವಿರುದ್ಧವಾಗಿದೆ. ಇದು ಜೀವಿಗಳಿಗೆ ನಿಷ್ಕರುಣೆ ತೋರಿಸುವ ತಿದ್ದುಪಡಿಯಾಗಿದೆ. ಇದು ಸಂವಿಧಾನ ವಿರೋಧಿಯಾಗಿದೆ. ಆದ್ದರಿಂದ ಸಂವಿಧಾನದ ರಕ್ಷಣೆಗಾಗಿ ತಮ್ಮ ಘನ ಹುದ್ದೆಯನ್ನು ಯತೋಚಿತವಾಗಿ ಬಳಸಿ ಈ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಸರ್ಕಾರಕ್ಕೆ ಮಾರ್ಗದರ್ಶನವನ್ನು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಪ್ರದೀಪ ಪಾಟೀಲ ಹೊಸಳ್ಳಿ, ಕಾರ್ಯದರ್ಶಿ ಮಹಾದೇವ ಅಂಗಡಿ ವಿಭಾಗ ಬಜರಂಗದಳ ಸಂಯೋಜಕ ಅಜಯ್ ಬಿದರಿ, ಹಾಗೂ ಪ್ರಖಂಡಗಳಿಂದ ಕಾರ್ಯದರ್ಶಿಗಳು, ಬಜರಂಗದಳ ಸಂಯೋಜಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!