ಕೊಂಚೂರು ಗ್ರಾಮದಲ್ಲಿ ಕಾಟಾಚಾರಕ್ಕೆ ನಡೆದ ಪೌತಿ ಖಾತಾ ಆಂದೋಲನ | ಮನೆ ಬಾಗಿಲಿಗೆ ಪೌತಿ ಖಾತೆ ತಲುಪಿಸದ ಅಧಿಕಾರಿಗಳು: ಆರೋಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕೊಂಚೂರು ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪೌತಿ ಖಾತಾ ಆಂದೋಲನ ಕಾಟಾಚಾರಕ್ಕೆ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಮೇಶ ಡಿ.ಸಿ ಕೊಂಚೂರು ಆರೋಪಿಸಿದ್ದಾರೆ.
ಮೃತರ ಹೆಸರಿನಲ್ಲಿ ಉಳಿದಿರುವ ಜಮೀನಿನ ದಾಖಲೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡುವ ಸಲುವಾಗಿ ಮನೆ ಬಾಗಿಲಿಗೆ ಪೌತಿ ಖಾತೆ ತಲುಪಿಸುವ ವಿಶೇಷ ಅಭಿಯಾನ ನಡೆಸಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಮನೆ ಮನೆಗೆ ಹೋಗದೆ ಗ್ರಾಮದ ಹನುಮಾನ್ ಮಂದಿರದಲ್ಲಿ ಕುಳಿತುಕೊಂಡು ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ಕೂಡ ಪೌತಿ ಖಾತೆ ವರ್ಗಾವಣೆ ಆಗಿಲ್ಲ ಹೀಗಾಗಿ ಇದರಿಂದ ಅಧಿಕಾರಿಗಳ ಕಾರ್ಯವೈಖರಿ ತಿಳಿಯುತ್ತದೆ. ಮನೆ ಮನೆಗೆ ಹೋಗಿ ಕೆಲಸ ಮಾಡದೆ ದೇವಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತಾರೆ, ಒಂದೆರಡು ಮನೆಗೆ ಹೋಗಿ ಫೋಟೋ ತೆಗೆದುಕೊಂಡು ಬಂದು ನಂತರ ಹರಟೆ ಹೊಡೆಯುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇವರು ಬರೀ ರೈತರನ್ನು ಯಾಮಾರಿಸುವುದು ಬಿಟ್ರೆ ಮತ್ತೇನು ಕೆಲಸ ಮಾಡುತ್ತಿಲ್ಲ, ಇವರು ಪೌತಿ ಖಾತಾ ಆಂದೋಲನ ಇಟ್ಕೊಂಡು ಇಲ್ಲಿ ಬಂದು ಆ ಡಾಕ್ಯುಮೆಂಟ್ಸ್ ಕೊಡು ಈ ಡಾಕ್ಯುಮೆಂಟ್ಸ್ ಕೊಡು ಎಂದು ಕೇಳುತ್ತಾರೆ, ಆಗಿಂದಾಗ್ಗೆ ರೈತರು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದ್ದಾರೆ.
ಪೌತಿ ಖಾತಾ ಆಂದೋಲನ ಮಾಡುವವರು ಮನೆ ಮನೆಗೆ ಹೋಗಿ ಅಲ್ಲೇ ಪಂಚಿನಾಮೆ ಮಾಡಿ ಡಾಕ್ಯೂಮೆಂಟ್ಸ್ ರೆಡಿ ಮಾಡಿ ಪೌತಿಕತೆ ವರ್ಗಾವಣೆ ಮಾಡಬೇಕು ಆಗ ರೈತರಿಗೆ ಕಚೇರಿಗೆ ಹೋಗೋದು ತಪ್ಪುತ್ತೆ ಎಂದು ತಿಳಿಸಿದ್ದಾರೆ. ಈ ಕೂಡಲೇ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

