16 ನೇ ವಾರ್ಷಿಕೋತ್ಸವದ ಸಂಭ್ರಮಕ್ಕೆ ಕೊಪ್ಪಳ ಗವಿಮಠದ ಶ್ರೀಗಳು ಸಾಕ್ಷಿ | ವಿಶ್ವಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ, ಗ್ರಾಮೀಣ ಹಾಗೂ ಬಡ ಮಕ್ಕಳ ಶೈಕ್ಷಣಿಕ ಭರವಸೆಯ ಬೆಳಕು
ನಾಗಾವಿ ಎಕ್ಸಪ್ರೆಸ್ ವಿಶೇಷ ವರದಿ
ಚಿತ್ತಾಪುರ: ಮನುಷ್ಯನ ವಿಕಾಸಕ್ಕೆ ಶಿಕ್ಷಣ ಮೂಲಸಾಧನ. ಇದನ್ನರಿತ ಆಧುನಿಕ ಮನುಷ್ಯ ಸಮಾಜ ಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ ನೀಡುತ್ತಿದೆ. ತಂತ್ರಜ್ಞಾನಗಳ ಔನ್ನತಿಯ ಈ ಕಾಲಘಟ್ಟದಲ್ಲಿ ಹೊಸ ಹೊಸ ರೂಪದೊಂದಿಗೆ ಶಿಕ್ಷಣ ಸೇವೆ ನಡೆಯುತ್ತಿದೆ. ಇದೇ ಮಾದರಿಯ ಶಿಕ್ಷಣ ಪದ್ಧತಿಯ ಮೂಲಕ ಶಿಸ್ತು, ಗುಣಮಟ್ಟ ಹಾಗೂ ಜ್ಞಾನಾಧಾರಿತ ಶಿಕ್ಷಣದೊಂದಿಗೆ ವಿದ್ಯಾರ್ಥಿ ಸ್ನೇಹಿ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಂಡಿರುವ ಪಟ್ಟಣದ ವಿಶ್ವಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ವಿಭಿನ್ನವಾಗಿ ಕಾಣಿಸುತ್ತಿದೆ.
ಫೆ.23 ರಂದು ವಿಶ್ವಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ 16 ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾಕ್ಷಿಯಾಗಲಿದ್ದಾರೆ.
ನಗರದ ಮಕ್ಕಳು ಪಡೆಯುವ ಶಿಕ್ಷಣ ಸೌಲಭ್ಯ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗುವಂತಹ ವಾತಾವರಣ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಸುಸಜ್ಜಿತ ಕಟ್ಟಡ ಜೊತೆಗೆ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಕಳೆದ 2009-10 ನೇ ಸಾಲಿನಲ್ಲಿ ಪಾರಂಭವಾದ ಶಿಕ್ಷಣ ಸಂಸ್ಥೆ ಬಡ ಹಾಗೂ ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಭಾಗದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ವಿಶೇಷ.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಅವರು, ಶೈಕ್ಷಣಿಕ ಕಾಲಾವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಆಯೋಜಿಸಿ ಉತ್ತಮ ಕಲಿಕೆಗೆ ಪ್ರೋತ್ಸಾಹ ನೀಡಿ, ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ ಹಾಗೂ ಅವಶ್ಯಕವಾದ ಸೌಕರ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಪ್ರಯತ್ನ ಮಾಡಿದ್ದಾರೆ.
ಸುಸಜ್ಜಿತ ಕಟ್ಟಡ:
ಎಲ್ಲ ಮೂಲ ಸೌಲಭ್ಯಗಳ ಜೊತೆಗೆ ಸುಸಜ್ಜಿತ ಕಟ್ಟಡವಿದ್ದು, ಸುಸಜ್ಜಿತ ತರಗತಿ ಕೋಣೆಗಳು, ಗ್ರಂಥಾಲಯ, ಆಧುನಿಕ ಸೌಲಭ್ಯಗಳನ್ನೊಳಗೊಂಡ ಲ್ಯಾಬ್‌ಗಳು ಸೇರಿದಂತೆ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಿಬಿಎಸ್ಇ ಹಾಗೂ ಪಿಯು ಕಾಲೇಜು 4 ಎಕರೆ ಹಾಗೂ ಪಬ್ಲಿಕ್ ಶಾಲೆ 5 ಎಕರೆ ಒಟ್ಟು 9 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಕಟ್ಟಡವಿದೆ.
ಸಂಸ್ಥೆಯಲ್ಲಿ ನರ್ಸರಿ, ಪೂರ್ವ ಪ್ರಾಥಮಿಕ (ಎಲ್ ಕೆಜಿ, ಯುಕೆಜಿ) ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ, ಸಿಬಿಎಸ್ಇ ಶಾಲೆ ಹಾಗೂ ಪದವಿ ಪೂರ್ವ (ವಿಜ್ಞಾನ, ವಾಣಿಜ್ಯ ಮತ್ತು ಕಲಾ) ಪದವಿ ಕಾಲೇಜಿನ ತನಕದ ಶಿಕ್ಷಣ ಒಂದೇ ಸೂರಿನಡಿ ಲಭ್ಯವಿದೆ.
ಶಿಕ್ಷಣ ಸಂಸ್ಥೆಯಲ್ಲಿ 1600 ವಿದ್ಯಾರ್ಥಿಗಳು, 130 ಜನ ಸಿಬ್ಬಂದಿಗಳು:
ಈಗಾಗಲೇ ಪೂರ್ವ ಪ್ರಾಥಮಿಕ ದಿಂದ ಎಸ್ಸೆಸ್ಸೆಲ್ಸಿ ವರೆಗೆ 1000 ಹಾಗೂ ಪದವಿ ಪೂರ್ವ ಕಾಲೇಜಿನ 600 ವಿದ್ಯಾರ್ಥಿಗಳು ಸೇರಿ ಒಟ್ಟು 1600 ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಹಾಗೂ ಬೋಧಕರು 100 ಮತ್ತು ಬೋಧಕೇತರ ಸಿಬ್ಬಂದಿ 30 ಸೇರಿದಂತೆ ಒಟ್ಟು 130 ಜನ ಸಿಬ್ಬಂದಿಗಳು ಇದ್ದಾರೆ. ಈಗಾಗಲೇ ಈ ಸಂಸ್ಥೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ, ಪಶುವೈದಕೀಯ, ಫಾರ್ಮಸಿ ಸೇರಿದಂತೆ ಮುಂತಾದ ಪೋಫೆಸನಲ್ ಕೋರ್ಸ್ ಪೂರೈಸಿ ಉನ್ನತ ಸ್ಥಾನದಲ್ಲಿದಾರೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರಿಗೆ ಉಚಿತ ಬಸ್ ವ್ಯವಸ್ಥೆ:
ಶಿಕ್ಷಣ ಸಂಸ್ಥೆಯ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರಿಗೆ ಯಾವುದೇ ವಾಹನ ಶುಲ್ಕವಿಲ್ಲದೇ ಸಂಪೂರ್ಣ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹೊಸ ಕೋರ್ಸ್ ಗಳು ತರುವ ಉದ್ದೇಶವಿದೆ:
ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ವೃತ್ತಿಪರ ಕೋರ್ಸ್ ಗಳಿಗೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಬರುವ ದಿನಗಳಲ್ಲಿ ನರ್ಸಿಂಗ್, ಫಾರ್ಮಸಿ, ಪಾಲಟೇಕ್ನಿಕ್ ಸೇರಿದಂತೆ ಇತರೆ ಕೋರ್ಸ್ ಗಳು ತರುವ ಉದ್ದೇಶವಿದೆ ಎಂದು ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಅಭಿನಂದನಾ ಗ್ರಂಥದ ವಿಶೇಷ:
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಅವರ 65 ಜನ್ಮದಿನದ ಸಂಭ್ರಮ ಹಾಗೂ ಶಿಕ್ಷಣ ಸಂಸ್ಥೆಯ 16 ನೇ ವಾರ್ಷಿಕೋತ್ಸವ ಸವಿನೆನಪಿಗಾಗಿ ಪ್ರಾಚಾರ್ಯ ಸೋಮಶೇಖರ ಕಲ್ಲಶೆಟ್ಟಿ ಸಂಪಾದಕತ್ವದಲ್ಲಿ ರಚನೆಗೊಂಡ ಅಭಿನಂದನಾ ಗ್ರಂಥ. ಈ ಗ್ರಂಥ 166 ಪುಟಗಳನ್ನು ಹೊಂದಿದ್ದು, 73 ಜನರ ಲೇಖನಗಳಿವೆ, ಐದು ಜನ ಸ್ವಾಮೀಜಿಗಳ ಶುಭ ಸಂದೇಶಗಳಿರುವುದು ವಿಶೇಷ.
ಈಗಿನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಗಗನಕುಸುಮವಾಗಿದೆ. ಇದನ್ನು ಅರಿತ ನಾಗರೆಡ್ಡಿ ಪಾಟೀಲ ಕರದಾಳ ಅವರು ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಕೀಯಾಶೀಲತೆ ಪುಟಿದೇಳುವಂತೆ ಮಾಡಿ ನಾಯಕತ್ವ ಗುಣ ಬೆಳೆಸಲು ಶಿಕ್ಷಣ ಸಂಸ್ಥೆ ಸದಾ ಒಂದಿಲ್ಲೊಂದು ಕಾರ್ಯಕ್ರಮ ಸಂಯೋಜಿಸುತ್ತಾ ಬರುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಕೌಶಲವನ್ನು ವೃದಿಸುವ ದೃಷ್ಟಿಯಿಂದ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಿಂದ ನಿರಂತರ ಉಪನ್ಯಾಸಗಳು ಮಾಡಿಸಿದ್ದಾರೆ.
ಒಟ್ಟಿನಲ್ಲಿ ಶಿಕ್ಷಣದ ವ್ಯಾಪಾರೀಕರಣದ ನಡುವೆ ನಾಗಾವಿ ನಾಡಿನ ಈ ಶಿಕ್ಷಣ ಸಂಸ್ಥೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಪಟ್ಟಣ ಮತ್ತು ಗಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದರೆ ತಪ್ಪಾಗಲಾರದು.
“ನಗರ ಪ್ರದೇಶದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದಲ್ಲಿ ಮಾಧ್ಯಮ, ಬಡವರ ಮಕ್ಕಳಿಗೂ ಸಿಗಬೇಕೆಂಬ ಉದ್ದೇಶದಿಂದ ಚಿತ್ತಾಪುರ ಪಟ್ಟಣದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದು, ನಗರಕ್ಕೆ ಹೋಲಿಕೆ ಮಾಡಿದರೆ ಅವರಿಗಿಂತ ನಾವು ಒಂದು ಹೆಜ್ಜೆ ಮುಂದಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಆರ್.ವಿ, ರಾಮಯ್ಯ ಹಾಗೂ ಬಿಎಂಎಸ್ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವುದೇ ನಮಗೆ ಹೆಮ್ಮೆಯ ವಿಷಯ”.-ನಾಗರೆಡ್ಡಿ ಪಾಟೀಲ ಕರದಾಳ, ಅಧ್ಯಕ್ಷರು ವಿಶ್ವಗುರು ಶಿಕ್ಷಣ ಸಂಸ್ಥೆ ಚಿತ್ತಾಪುರ.
“ಪೂರ್ವ ಪಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದವರೆಗೆ ಅತ್ಯುತ್ಕೃಷ್ಟ ಗುಣಮಟ್ಟದ ಶಿಕ್ಷಣ ಇಲ್ಲಿ ಲಭ್ಯವಿದೆ. ತಾಲೂಕಿನಲ್ಲಿಯೇ ಅತ್ಯುತ್ತಮ ಫಲಿತಾಂಶ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ನಮ್ಮ ಸಂಸ್ಥೆ ಪ್ರಸಿದ್ದಿ ಪಡೆದಿದೆ, ಇದಕ್ಕೆ ಇಲ್ಲಿನ ಸಿಬ್ಬಂದಿಗಳ ಸೇವೆ ಪ್ರಮುಖ ಕಾರಣ”.-ವಿಶ್ವರಾಧ್ಯ ಎನ್.ಪಾಟೀಲ ಕಾರ್ಯದರ್ಶಿ ವಿಶ್ವಗುರು ಶಿಕ್ಷಣ ಸಂಸ್ಥೆ ಚಿತ್ತಾಪುರ.

