ಮಾಡಬೂಳ ಪೊಲೀಸ್ ಠಾಣೆಯಲ್ಲಿ ಜಾಗೃತಿ ಸಭೆ | ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: ಶಂಕರಗೌಡ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ:ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಸೂಚಿಸಿದರು.
ತಾಲೂಕಿನ ಮಾಡಬೂಳ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನದಟ್ಟಣೆ ಇರುವ ಪ್ರದೇಶಗಳು, ಶಾಲೆಗಳು, ಕಾಲೇಜುಗಳು ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿ ವಾಹನಗಳನ್ನು ನಿಧಾನಗತಿಯಲ್ಲಿ ಚಲಾಯಿಸುವಂತೆ ತಿಳಿಸಿದರು.
ವಾಹನಗಳನ್ನು ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸದೇ, ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ನಿಗದಿತ ಸ್ಥಳದಲ್ಲಿ ಹಾಗೂ ಕ್ರಮಬದ್ಧವಾಗಿ ಪಾರ್ಕಿಂಗ್ ಮಾಡುವಂತೆ ಸೂಚಿಸಿದರು. ಒಂದು ವೇಳೆ ವಾಹನ ರಸ್ತೆ ಮಧ್ಯೆ ಕೆಟ್ಟು ನಿಂತಲ್ಲಿ ಕೂಡಲೇ ಜಿ.ವಿ.ಆರ್. ಟೋಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ವಾಹನದ ಪಾರ್ಕಿಂಗ್ ಲೈಟ್‌ಗಳನ್ನು ಆನ್ ಮಾಡಿ, ವಾಹನದ ಸುತ್ತಮುತ್ತ ಟ್ರಾಫಿಕ್ ಕೋನ್‌ಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟುವಂತೆ ತಿಳಿಸಿದರು.
ಅಲ್ಲದೆ, ಯಾವುದೇ ರಸ್ತೆ ಅಪಘಾತ ಸಂಭವಿಸಿದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112ಕ್ಕೆ ಮಾಹಿತಿ ನೀಡಬೇಕು. ಗಾಯಾಳುಗಳಿಗೆ 108 ಆಂಬ್ಯುಲೆನ್ಸ್ ಸೇವೆ ಮೂಲಕ ಗೋಲ್ಡನ್ ಅವರ್ (Golden Hour) ಅವಧಿಯೊಳಗೆ ಚಿಕಿತ್ಸೆ ದೊರಕುವಂತೆ ಆಸ್ಪತ್ರೆಗೆ ದಾಖಲಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ನೆರವು ನೀಡಿ ಆಸ್ಪತ್ರೆಗೆ ದಾಖಲಿಸುವ ಸಾರ್ವಜನಿಕರಿಗೆ ಸರ್ಕಾರದ “ರಾಹ್-ವೀರ್ (Raah-Veer) ಯೋಜನೆ” ಅಡಿಯಲ್ಲಿ ಪುರಸ್ಕಾರ ಹಾಗೂ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿ, ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಯಿತು.
ಸಭೆಯಲ್ಲಿ ಪಿಎಸ್ಐ ಗೌತಮ್ ಗುತ್ತೇದಾರ, (ಕಾನೂನು ಸುವ್ಯವಸ್ಥೆ), ಪಿಎಸ್ಐ ಸಿದ್ದಲಿಂಗ (ತನಿಖೆ), ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು. ಅಲ್ಲದೆ, ಚಿತ್ತಾಪುರ, ಮಳಖೇಡ ಹಾಗೂ ಸೇಡಂ ಲಾರಿ ಅಸೋಸಿಯೇಷನ್ ಅಧ್ಯಕ್ಷರು, ಲಾರಿ, ಟಿಪ್ಪರ್ ಹಾಗೂ ಬಲ್ಕರ್ ವಾಹನಗಳ ಮಾಲೀಕರು ಮತ್ತು ಚಾಲಕರು ಹಾಗೂ ರಾಜ್ಯ ಹೆದ್ದಾರಿ-10ರ ಜಿ.ವಿ.ಆರ್. (GVR) ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
“ಪ್ರತಿಯೊಬ್ಬ ವಾಹನ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ (DL), ವಾಹನ ನೋಂದಣಿ ಪ್ರಮಾಣಪತ್ರ (RC) ಹಾಗೂ ವಿಮೆ (Insurance) ಹೊಂದಿರಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಮದ್ಯಪಾನದ ಅಮಲಿನಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡುಬಂದಲ್ಲಿ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು”.-ಶಂಕರಗೌಡ ಪಾಟೀಲ ಡಿವೈಎಸ್ಪಿ ಶಹಾಬಾದ.

