2051ನೇ ಮದ್ಯ ವ್ಯರ್ಜನ ಶಿಬಿರದ ಸಮಾರೋಪ ಸಮಾರಂಭ | ಮದ್ಯ ವ್ಯರ್ಜನ ಶಿಬಿರಗಳು ಅನೇಕ ಕುಟುಂಬಗಳಿಗೆ ಹೊಸ ಬದುಕಿನ ಬೆಳಕು ನೀಡಿವೆ: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ), ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಸಮಾಜಮುಖಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ 2051ನೇ ಮದ್ಯ ವ್ಯರ್ಜನ ಶಿಬಿರದ ಸಮಾರೋಪ ಸಮಾರಂಭವು ಪಟ್ಟಣದ ಶ್ರೀ ಕಂಬಳೇಶ್ವರ ಸಂಸ್ಥಾನ ಮಠದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ, ಸಮಾಜಮುಖಿ ಸಂದೇಶಗಳೊಂದಿಗೆ ಹಾಗೂ ಸಂಸ್ಕೃತಿಯ ವೈಭವದ ಮಧ್ಯೆ ಭವ್ಯವಾಗಿ ನೆರವೇರಿತು.
ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಇಂದಿನ ಸಮಾಜದಲ್ಲಿ ಮದ್ಯವ್ಯಸನವು ಮಾನವ ಜೀವನದ ಮೌಲ್ಯಗಳನ್ನು ಕುಗ್ಗಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮದ್ಯಪಾನದಿಂದ ಕುಟುಂಬಗಳಲ್ಲಿ ಅಶಾಂತಿ, ಆರೋಗ್ಯ ಸಮಸ್ಯೆಗಳು, ಆರ್ಥಿಕ ಹಿನ್ನಡೆ ಹಾಗೂ ಸಾಮಾಜಿಕ ಅಸ್ಥಿರತೆ ಉಂಟಾಗುತ್ತಿದ್ದು, ಯುವಪೀಳಿಗೆ ಇದರಿಂದ ದೂರವಿರುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. ಧರ್ಮ, ಸಂಸ್ಕಾರ ಮತ್ತು ಆತ್ಮನಿಗ್ರಹದಿಂದ ಜೀವನದಲ್ಲಿ ಉತ್ತಮ ಸಾಧನೆ ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು, ಮದ್ಯ ವ್ಯರ್ಜನ ಶಿಬಿರಗಳು ಅನೇಕ ಕುಟುಂಬಗಳಿಗೆ ಹೊಸ ಬದುಕಿನ ಬೆಳಕು ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಬಸಪ್ಪ ಸಲದಾಪೂರ ಮಾತನಾಡಿ, ಮದ್ಯಪಾನವು ಕೇವಲ ವ್ಯಕ್ತಿಯ ಸಮಸ್ಯೆಯಲ್ಲ, ಅದು ಕುಟುಂಬ ಹಾಗೂ ಸಮಾಜದ ಸಮಸ್ಯೆಯಾಗಿದೆ ಎಂದು ಹೇಳಿದರು. ಮದ್ಯವ್ಯಸನದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು. ಸರ್ಕಾರ ಮತ್ತು ಸಮಾಜ ಸಂಘಟನೆಗಳು ಕೈಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಶಿಬಿರದಲ್ಲಿ ಭಾಗವಹಿಸಿದವರು ತಮ್ಮ ಜೀವನದಲ್ಲಿ ಕಂಡ ಬದಲಾವಣೆಗಳನ್ನು ಇತರರಿಗೂ ತಿಳಿಸಿ ಸಮಾಜ ಪರಿವರ್ತನೆಗೆ ಕಾರಣರಾಗಬೇಕು ಎಂದು ಕರೆ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ), ಬೆಳ್ತಂಗಡಿ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಮದ್ಯ ವ್ಯರ್ಜನ ಶಿಬಿರಗಳು ಅನೇಕ ಜನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿವೆ ಎಂದು ಹೇಳಿದರು. ವ್ಯಸನಮುಕ್ತ ಜೀವನದ ಮೂಲಕ ಕುಟುಂಬಗಳಲ್ಲಿ ಸಂತೋಷ ಹಾಗೂ ನೆಮ್ಮದಿ ಹೆಚ್ಚುತ್ತಿದೆ ಎಂದು ಹೇಳಿದರು. ಯುವಕರು ಮೊಬೈಲ್ ಮತ್ತು ಮದ್ಯದಂತಹ ದುಶ್ಚಟಗಳಿಂದ ದೂರವಿದ್ದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ), ಕಲಬುರಗಿ ಪ್ರಾದೇಶಿಕ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು. ಮದ್ಯ ವ್ಯರ್ಜನ ಶಿಬಿರಗಳು ಕೇವಲ ಕೆಲವು ದಿನಗಳ ಕಾರ್ಯಕ್ರಮವಲ್ಲ, ಅದು ವ್ಯಕ್ತಿಯ ಮನೋಬಲ ಹೆಚ್ಚಿಸಿ ಹೊಸ ಬದುಕಿನತ್ತ ಕೊಂಡೊಯ್ಯುವ ಮಹತ್ವದ ಚಳವಳಿಯಾಗಿದೆ ಎಂದು ಹೇಳಿದರು. ಶಿಬಿರದಲ್ಲಿ ಭಾಗವಹಿಸಿದ ಅನೇಕರು ಇಂದು ತಮ್ಮ ಕುಟುಂಬದೊಂದಿಗೆ ಸಂತೋಷಕರ ಜೀವನ ನಡೆಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಯಾದಗಿರಿ ಜಿಲ್ಲಾ ನಿರ್ದೇಶಕ ವಸಂತಗೌಡ ಬಿ ಮಾತನಾಡಿ, ಮದ್ಯಪಾನದಿಂದ ದೂರವಿರುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು. ವ್ಯಕ್ತಿಯ ಆರೋಗ್ಯ, ಕುಟುಂಬದ ಭವಿಷ್ಯ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಮದ್ಯಮುಕ್ತ ಜೀವನ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಶಿಬಿರಾರ್ಥಿಗಳು ತಮ್ಮ ಸಂಕಲ್ಪವನ್ನು ಜೀವಿತಾವಧಿಯವರೆಗೆ ಉಳಿಸಿಕೊಂಡು ಇತರರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿ, ಯುವಕರು ಶಿಕ್ಷಣ, ಸಂಸ್ಕಾರ ಹಾಗೂ ಆತ್ಮವಿಶ್ವಾಸದ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಬೇಕು ಎಂದು ಹೇಳಿದರು. ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯವೆಂದು ತಿಳಿಸಿದರು.
ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಹಲವಾರು ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಮದ್ಯಪಾನ ತ್ಯಜಿಸಿದ ನಂತರ ತಮ್ಮ ಕುಟುಂಬದಲ್ಲಿ ಉಂಟಾದ ಸಂತೋಷ, ಆರೋಗ್ಯದಲ್ಲಿ ಕಂಡ ಸುಧಾರಣೆ ಹಾಗೂ ಸಮಾಜದಲ್ಲಿ ದೊರೆತ ಗೌರವದ ಕುರಿತು ಮನಮುಟ್ಟುವ ರೀತಿಯಲ್ಲಿ ಮಾತನಾಡಿದರು. ಕೆಲವರ ಅನುಭವಗಳು ಸಭೆಯಲ್ಲಿ ನೆರೆದಿದ್ದವರ ಕಣ್ಣಲ್ಲಿ ಕಣ್ಣೀರನ್ನು ತರಿಸಿದವು.
ಶಿಬಿರಾಧಿಕಾರಿಯಾಗಿ ನಾಗೇಂದ್ರ ಅವರು ಶಿಬಿರದ ಸಂಪೂರ್ಣ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಕೈಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಆರೋಗ್ಯ ಸಹಾಯಕರಾದ ವೆಂಕಟೇಶ್ ಅವರು ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಶಿಬಿರಾರ್ಥಿಗಳು ಮದ್ಯಪಾನವನ್ನು ಸಂಪೂರ್ಣ ತ್ಯಜಿಸಿ ಆರೋಗ್ಯಕರ, ಶಾಂತಿಯುತ ಹಾಗೂ ಸಮಾಜಮುಖಿ ಜೀವನ ನಡೆಸುವ ಸಂಕಲ್ಪ ಕೈಗೊಂಡರು.
ಪ್ರಾದೇಶಿಕ ಕಚೇರಿ ಕಲಬುರಗಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ರಾಜೇಶ್ ಕೆ ಅವರು, ಗಣ್ಯರಿಗೆ ಗೌರವ ವಂದನೆ ಸಲ್ಲಿಸಿ ಕಾರ್ಯಕ್ರಮದ ಉದ್ದೇಶ ಹಾಗೂ ಶಿಬಿರದ ಸಾಧನೆಗಳ ಕುರಿತು ವಿವರಿಸಿದರು. ಗೋದಾವರಿ ಮತ್ತು ಸಂಗಡಿಗರು ಅವರು ಭಕ್ತಿಪೂರ್ಣ ಪ್ರಾರ್ಥನಾ ಗೀತೆಯನ್ನು ಹಾಡುವ ಮೂಲಕ ಸಮಾರಂಭಕ್ಕೆ ಆಧ್ಯಾತ್ಮಿಕ ಸ್ಪರ್ಶ ನೀಡಿದರು, ತಾಲೂಕು ಯೋಜನಾಧಿಕಾರಿ ಗುರುರಾಜ್ ಬಿ ಅವರು ಸ್ವಾಗತಿಸಿದರು.
