ನಾಯಕ, ತಳವಾರ ಹೆಸರಿನಲ್ಲಿ ಪ್ರವರ್ಗ-1ರ ಜಾತಿಯವರಿಗೆ ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸುವಂತೆ ಮಹರ್ಷಿ ವಾಲ್ಮೀಕಿ ಸಮಾಜ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ, ತಳವಾರ ಹೆಸರಿನಲ್ಲಿ ಪ್ರವರ್ಗ-1 ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ವಂಚಿಸುತ್ತಿರುವ ಹಾಗೂ ಅನ್ಯ ಸಮುದಾಯದವರನ್ನು ಎಸ್.ಟಿ ಪಟ್ಟಿಗೆ ಸೇರಿಸುತ್ತಿರುವುದನ್ನು ಖಂಡಿಸಿ ಮಹರ್ಷಿ ವಾಲ್ಮೀಕಿ ಸಮಾಜ ತಾಲೂಕು ಸಮಿತಿ ನೇತೃತ್ವದಲ್ಲಿ ಶುಕ್ರವಾರ ಮುಖಂಡರು ಪ್ರತಿಭಟಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಭೀಮರಾಯ ದೋರಿ ಮಾತನಾಡಿ, ಇತರೆ ಹಿಂದುಳಿದ ವರ್ಗಗಳ ಪ್ರವರ್ಗ1 ದಲ್ಲಿರುವ ಬೆಸ್ತ, ಅಂಬಿಗರ, ಕಬ್ಬಲಿಗ, ಕುಬ್ಬೇರ್, ಕೊಲಿ ಮುಂತಾದ ಜಾತಿಯವರಿಗೆ ನಾಯಕ, ತಳವಾರರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಹಾಗೇನಾದರೂ ನಾಯಕ ತಳವಾರ ಜಾತಿಗೆ ಸೇರಿಲ್ಲದವರು ವಾಮ ಮಾರ್ಗದಲ್ಲಿ ಪರಿಶಿಷ್ಟ ಪಂಗಡದ ನಕಲಿ ಪ್ರಮಾಣ ಪತ್ರಗಳನ್ನು ಪಡೆದಿದ್ದಲ್ಲಿ ಕರ್ನಾಟಕ ಉಚ್ಛ ನ್ಯಾಯಲಯದ ಆದೇಶದಂತೆ ಅಂತಹವರ ಮೇಲೆ ಮತ್ತು ಅಂತಹ ಜಾತಿ ಪ್ರಮಾಣ ಪತ್ರಗಳನ್ನು ನೀಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಜನಾಂಗದ ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಭಾರತ ಸಂವಿಧಾನ ಪರಿಚ್ಚೇಧ 341 ಮತ್ತು 342ರಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಅನೇಕ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ 1950 ಮತ್ತು ಅದರ ಅಧಿಸೂಚನೆಗಳಡಿ ಮೀಸಲಾತಿ ನೀಡಿ ಅವಕಾಶಗಳನ್ನು ಒದಗಿಸಿರುವುದು ಸರಿಯಷ್ಟೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆಯುತ್ತಾ ಬಂದರೂ ಪರಿಶಿಷ್ಟ ಪಂಗಡದವರ ಮೇಲೆ ನಿರಂತರ ಶೋಷಣೆ, ದಬ್ಬಾಲಿಕೆ, ದೌರ್ಜನ್ಯಗಳು ಮತ್ತು ಮೀಸಲಾತಿಯ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಖಂಡನೀಯ. ಇಂದು ಭಾರತೀಯ ಸಂಸ್ಕೃತಿಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೇ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಹಾಗೂ ಭಾರತದ ಶೋಷಿತ ಸಮುದಾಯಗಳ ಧ್ವನಿ, ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಂಘೀಕವಾಗಿ ಒಟ್ಟಾಗಿ ಮೀಸಲಾತಿ ಕಬಳಿಸುವವರ ವಿರುದ್ಧ ಹೋರಾಡುವ ಅನಿವಾರ್ಯ ಎದುರಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಾಬಣ್ಣ ಮುಸ್ಲಾ, ರಾಜು ದೋರಿ, ಅಂಬಣ್ಣ ಬೊಮ್ಮನಹಳ್ಳಿ, ಹಣಮಂತ ಬೊಮ್ಮನಹಳ್ಳಿ, ಮೌನೇಶ್ ಲಾಡ್ಲಾಪೂರ, ಸಾಬಣ್ಣ ಲಾಡ್ಲಾಪೂರ, ರಾಮು ಮುಸ್ಲಾ, ಭೀಮರಾಯ ಲಾಡ್ಲಾಪೂರ, ಸಾಬಣ್ಣ ಕುಂಬಾರಹಳ್ಳಿ, ಹಣಮಂತ ಗಲಿಗಿನ್, ಅಮೃತ್ ಶಾಮನೂರ, ಮಹಾದೇವ ಬೊಮ್ಮನಹಳ್ಳಿ, ಉಮೇಶ್ ದೋರಿ, ವೆಂಕಟೇಶ್ ಬಳಿಚಕ್ರ, ಜಗದೇವ ಚಾಮನೂರ, ಚಂದ್ರು ಇಟಗಾ, ಭಾಗಣ್ಣ ದೋರಿ, ಸಾಯಬಣ್ಣ ವಾಡಿ, ದೇವಪ್ಪ ಕುಂಬಾರಹಳ್ಳಿ, ನಿಂಗಣ್ಣ ಚಾಮನೂರ, ಹಣಮಂತ ದಿಗ್ಗಾಂವ, ಶರಣು ವಾಡಿ, ಭೀಮಾಶಂಕರ ದಿಗ್ಗಾಂವ ಸೇರಿದಂತೆ ಇತರರು ಇದ್ದರು.
