ಮಾಲಗತ್ತಿ ಗ್ರಾಪಂ ಅಧ್ಯಕ್ಷ, ಪಿಡಿಒ ವಿರುದ್ಧ ಡಿಎಸ್ಎಸ್ ಆರೋಪ | ದುಡ್ಡು ಕೊಟ್ಟವರಿಗೆ ಮಾತ್ರ ಮನೆ ನಿರ್ಮಾಣಕ್ಕೆ ಅನುಮತಿ ಪತ್ರ, ದುಡ್ಡು ನೀಡದವರಿಗೆ ಅನ್ಯಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತ ಕ್ಷೇತ್ರದ ಮಾಲಗತ್ತಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಓ ಸೇರಿಕೊಂಡು ದುಡ್ಡು ಕೊಟ್ಟವರಿಗೆ ಮಾತ್ರ ಮನೆ ನಿರ್ಮಾಣಕ್ಕೆ ಅನುಮತಿ ಪತ್ರ ನೀಡಿದ್ದಾರೆ ದುಡ್ಡು ಕೊಡದವರಿಗೆ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಶಿವಮೂರ್ತಿ ಪಾಮನೋರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಂಚಾಯತ್ ವ್ಯಾಪ್ತಿಯ ಯರಗಲ್ ಗ್ರಾಮದ 2024-25ನೇ ಸಾಲಿನ ಇಂದಿರಾ ಆವಾಜ್ ಯೋಜನೆ ಮನೆಯಲ್ಲಿ ಫಲಾನುಭವಿಗಳಿಗೆ ಆಯ್ಕೆಯಾದ ಮನೆಗಳಲ್ಲಿ 2012-13ನೇ ಸಾಲಿನಲ್ಲಿ ಆಯ್ಕೆಯಾದ ಹಲವಾರು ಫಲಾನುಭವಿಗಳಿಗೆ ಈಗಾಗಲೇ ಮನೆ ಕಟ್ಟಲು ಅನುಮತಿ ಪತ್ರ ಕೊಟ್ಟಿದ್ದು ತಮಗೆ ಯಾರು ಹಣ ಕೊಟ್ಟಿರುವರೋ ಅಂಥವರಿಗೆ ಮಾತ್ರ ಅನುಮತಿ ಪತ್ರ (ವರ್ಕ್ ಆರ್ಡರ್) ಕೊಟ್ಟು ಮನೆ ಕಟ್ಟಲು ಅವಕಾಶ ಮಾಡಿ ಮೊದಲನೆ ಹಂತ ಬಿಲ್ ಸಹ ಮಾಡಿರುತ್ತಾರೆ. ಇನ್ನುಳಿದ ಫಲಾನುಭವಿಗಳು ವರ್ಕ್ ಆರ್ಡರ್ ಕೇಳಿದರೆ ನಿಮ್ಮ ಮನೆಗಳು ಹಿಂದೆ 2012-13ನೇ ಸಾಲಿನಲ್ಲಿ ತೆಗೆದುಕೊಂಡಿರುವಿರಿ ಎಂದು ಹಣ ಕೊಡದವರಿಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಾಲಗತ್ತಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಸೇರಿಕೊಂಡು ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಅನ್ಯಾಯಕ್ಕೊಳಗಾದ ಫಲಾನುಭವಿಗಳಿಗೆ ನ್ಯಾಯ ಕೊಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

