ತಹಸೀಲ್ದಾರ್ ಅವರಿಗೆ ಮನವಿ | ಮುತ್ತಗಾ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ವಿಎಚ್’ಪಿ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಪ್ರತಿ ಶರಣರ ಮತ್ತು ಮಂದಿರದ ಮೂರ್ತಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿ ಬುಧವಾರ ವಿಶ್ವ ಹಿಂದು ಪರಿಷತ್ ಚಿತ್ತಾಪುರ ಪ್ರಖಂಡದ ಪ್ರಮುಖರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ಮಹಾದೇವ ಅಂಗಡಿ ಮಾತನಾಡಿ, ಮುತ್ತಗಾ ಗ್ರಾಮದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಸಗಣೆ ಹಚ್ಚಿ ಒಂದು ಕೈಯನ್ನು ಮುರಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದ್ಯಾಂತ ಶರಣರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿಗಳಿಗೆ ಸಿ.ಸಿ.ಕ್ಯಾಮರ ಅಳವಡಿಸುವ ಸೂಕ್ತ ಪೊಲೀಸ್ ಬಂದೋಬಸ್ತ ನೀಡಬೇಕು ಎಂದು ಒತ್ತಾಯಿಸಿದರು.
ಈ ಒಂದು ಕೃತ್ಯ ಶರಣ ಸಂಸ್ಕೃತಿಗೆ ಅಪಮಾನ ಮಾಡಿದಂತಾಗಿದೆ. ಇದೆ ರೀತಿಯಲ್ಲಿ ಸುಮಾರು ದಿನಗಳ ಹಿಂದೆ ಅನೇಕ ಶರಣರ ಹಾಗೂ ದೇವರ ಮೂರ್ತಿಗಳನ್ನು ಭಗ್ನಗೊಳಿಸಿ ಅವಮಾನ ಮಾಡಿರುವುದು ಖಂಡನಿಯವಾಗಿರುತ್ತದೆ. ಇಂತಹ ಕೃತ್ಯ ಎಸಗಿರುವ ಹಾಗೂ ಅವರ ಹಿಂದೆ ಇರುವ ಕೆಲವು ಕಾಣದ ಕೈಗಳನ್ನು ಪತ್ತೆ ಹಚ್ಚಿ ಅವಮಾನ ಮಾಡಿರುವವರನ್ನು ಕೂಡಲೇ ಬಂದಿಸಿ ಕಠಿಣವಾದ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಇದೇ ರೀತಿ ಮುಂದಿನ ದಿನಗಳಲ್ಲಿ, ಶರಣರ ಹಾಗೂ ಮಹಾನ್ ನಾಯಕರ ಪುತ್ಥಳಿಗೆ ಸಿ.ಸಿ.ಕ್ಯಾಮರಾ ಅಳವಡಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಿ ಅಹಿತಕರ ಘಟನೆಗಳನ್ನು ನಡೆಯದಂತೆ ಮುಂಜಾಗ್ರತ ಕ್ರಮ ವಹಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಸದರಿ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಬಂಧಿಸದೆ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಶ್ವ ಹಿಂದು ಪರಿತ್ ವಿಭಾಗ ಸಂಯೋಜಕ ಅಜಯ ಬಿದರಿ, ಪ್ರಖಂಡ ಅಧ್ಯಕ್ಷ ಶ್ರೀನಿವಾಸ ಹಳ್ಳಿ, ಕಾರ್ಯದರ್ಶಿ ಸಾಬಣ್ಣ ಪುಜಾರಿ ಬಜರಂಗದಳದ ಸಂಯೋಜಕ ಮಲ್ಲಿಕಾರ್ಜುನ ಉಪ್ಪಾರ, ನಗರ ಅಧ್ಯಕ್ಷ ಯಲ್ಲಾಲಿಂಗ ಸುಲ್ತಾನಪೂರ, ನಗರ ಸಂಯೋಜಕ ಯಲ್ಲಪ್ಪ ಪುಂಗಿ, ರವೀಂದ್ರ ಪೂಜಾರಿ, ಬಿಜಿಪಿಯ ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೂಗಾರ, ಪುರಸಭೆ ಸದಸ್ಯರಾದ ರಮೇಶ್ ಬೊಮ್ಮನಹಳ್ಳಿ, ಶಾಮ್ ಮೇಧಾ, ತಿಪ್ಪಣ್ಣ ಇವಣಿ, ಅಶೋಕ ದೊಡ್ಡಮನಿ ಹಾಗೂ ಇನ್ನಿತರ ಹಿಂದು ಬಾಂಧವರು ಉಪಸ್ಥಿತರಿದ್ದರು.

