ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅವಾಚ್ಯವಾಗಿ ನಿಂದಿಸಿದ ಘಟನೆಯನ್ನು ಖಂಡಿಸಿ ನಾಳೆ ಚಿತ್ತಾಪುರ ಬಂದ್ | ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು: ಭೀಮಣ್ಣ ಸಾಲಿ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದವರಿಗೆ ಅವಾಚ್ಯವಾಗಿ ಹಾಗೂ ಅಶ್ಲೀಲ ಶಬ್ದಗಳಿಂದ ವೈಯಕ್ತಿಕವಾಗಿ ನಿಂದಿಸಿದ ಘಟನೆಯನ್ನು ಖಂಡಿಸಿ ನಾಳೆ (ಅ.16 ರಂದು) ಚಿತ್ತಾಪುರ ಬಂದ್ ಕರೆ ನೀಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಪೂರ್ಣ ಬಂದ್ ಮಾಡಲಾಗುವುದು ಹೀಗಾಗಿ ಪಟ್ಟಣದ ಎಲ್ಲಾ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದ ಚಿತ್ತಾವಲಿ ವೃತ್ತದಿಂದ ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ಪ್ರಾರಂಭಿಸಿ, ಕಪ್ಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಲಾಡ್ಜಿಂಗ್ ಕ್ರಾಸ್ ಹತ್ತಿರ ಸಮಾವೇಶಗೊಂಡು ನಂತರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಹೀಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.
ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಾಗೂ ದೇವಸ್ಥಾನಗಳು ಸೇರಿದಂತೆ ಸರ್ಕಾರದ ವ್ಯಾಪ್ತಿಯ ಯಾವುದೇ ಸ್ಥಳಗಳಲ್ಲಿ ಆರ್ ಎಸ್ ಎಸ್ ಕಾರ್ಯಚಟುವಟಿಕೆಗಳಿಗೆ ನಿಷೇಧ ಮಾಡಬೇಕು ಎಂದು ಸಚಿವರು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದಾಗಿನಿಂದ ಆರ್ ಎಸ್ ಎಸ್ ನವರಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಹಾಗೂ ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ವೈಯಕ್ತಿಕವಾಗಿ ನಿಂದಿಸಿದ್ದಾರೆ ಇದು ಖಂಡನೀಯ, ಇದರಿಂದ ಆರ್ ಎಸ್ ಎಸ್ ಸಂಸ್ಕೃತಿ ಎಂತಹದು ಎಂದು ತಿಳಿಯುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಬೀಣ್ಣಿ, ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ರಸೂಲ್ ಮುಸ್ತಫಾ, ಜಗದೀಶ್ ಚವ್ಹಾಣ, ಒಬಿಸಿ ಅಧ್ಯಕ್ಷ ನಾಗಯ್ಯ ಗುತ್ತೇದಾರ ಕರದಾಳ, ಮಹಿಳಾ ಅಧ್ಯಕ್ಷೆ ಸಪ್ನಾ ಪಾಟೀಲ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಯುವ ಅಧ್ಯಕ್ಷ ದೇವು ಯಾಬಾಳ, ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಈರಪ್ಪ ಭೋವಿ, ಎಂ.ಎ.ರಷೀದ್, ಸೂರ್ಯಕಾಂತ ಪೂಜಾರಿ, ಬಸಣ್ಣ ತಳವಾರ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಮುಡಬೂಳಕರ್, ನಜೀರ್ ಆಡಕಿ, ಖಾಜಾ ಬಾದಲ್, ಸಂತೋಷ ಪೂಜಾರಿ, ಸೋಮು ಟೋಕಾಪೂರ, ಬಸವರಾಜ ಮುಡಬೂಳ, ಗಂಗಾಧರ್ ಡಿಗ್ಗಿ, ಸೂರಜ್ ಕಲ್ಲಕ್ ಸೇರಿದಂತೆ ಇತರರು ಇದ್ದರು.

