ನಾಲವಾರದಲ್ಲಿ ಶ್ರಾವಣದ ಭಕ್ತಿ ಸಿರಿ | ಡಾ.ಸಿದ್ಧತೋಟೇಂದ್ರ ಶ್ರೀಗಳ ಪಾದಪೂಜಾ ವೈಭವ ಆರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠ ಶ್ರಾವಣದ ಸಂಭ್ರಮದಲ್ಲಿ ಮಿಂದೆದ್ದಿದೆ.
ಶ್ರೀಮಠದ ಪೀಠಾಧಿಪತಿ, ಭಕ್ತರ ಆರಾಧ್ಯ ಸದ್ಗುರು ಪರಮಪೂಜ್ಯ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಇಷ್ಟಲಿಂಗ ಮಹಾ ಪಾದಪೂಜೆಯೊಂದಿಗೆ ಈ ಬಾರಿಯ ಶ್ರಾವಣ ವೈಭವಕ್ಕೆ ಎರಡನೇ ಗುರುವಾರ ಚಾಲನೆ ದೊರೆತಿದೆ.
ಕೈಲಾಸ ಮಂಟಪದ ಸಿದ್ಧಸಿಂಹಾಸನದ ಮೇಲೆ ಪ್ರತಿದಿನ ಗುರುಪಾದಪೂಜೆಯ ಝೇಂಕಾರ, ಖ್ಯಾತ ಗಾಯಕರ ಭಕ್ತಿಗೀತೆ, ಮಂತ್ರಘೋಷ, ಇಷ್ಟಲಿಂಗದ ದಿವ್ಯ ದರ್ಶನದೊಂದಿಗೆ ಭಕ್ತರು ಗುರುಗಳ ಪಾದಕ್ಕೆ ನಮಿಸಿ ಕೃತಾರ್ಥರಾಗುತ್ತಿದ್ದಾರೆ.
ಪ್ರತಿದಿನ ಮುಂಜಾನೆ ಶ್ರೀ ಕೋರಿಸಿದ್ಧೇಶ್ವರರ ಕರ್ತೃ ಗದ್ದುಗೆಗೆ ವಿಶೇಷ ಅಭಿಷೇಕ, ಮಹಾಮಂಗಳಾರತಿ ನೆರವೇರುತ್ತಿದೆ. ಸಂಜೆ ಗುರುಮಹಾಪಾದಪೂಜೆ ಹಾಗೂ ಮಹಾಪ್ರಸಾದ ವಿತರಣೆ ನಡೆಯುತ್ತಿದೆ.
ನಾಲವಾರ ಶ್ರೀಮಠದ ಶ್ರಾವಣದ ಮತ್ತೊಂದು ವಿಶೇಷವೆಂದರೆ ಪಾದಯಾತ್ರೆ. ನಾಡಿನ ಮೂಲೆ ಮೂಲೆಗಳಿಂದ, ನೆರೆಯ ಜಿಲ್ಲೆಗಳಿಂದ ಭಕ್ತರು ಗುಂಪು ಗುಂಪಾಗಿ ಕಾಲ್ನಡಿಗೆಯಲ್ಲಿ ಮಠಕ್ಕೆ ಆಗಮಿಸುತ್ತಿದ್ದಾರೆ. ದವಸ-ಧಾನ್ಯ ಹೊತ್ತು ತಂದು ದಾಸೋಹಕ್ಕೆ ಸಮರ್ಪಿಸುವುದು, ಸೇವೆಯಲ್ಲಿ ಕೈಜೋಡಿಸುವುದು ಇಲ್ಲಿನ ತಲೆತಲಾಂತರದ ಭಕ್ತಿ ಪರಂಪರೆ.
ಶ್ರಾವಣವೆಂದರೆ ಕೇವಲ ಪೂಜೆಯಲ್ಲ, ಅದು ಮನಸ್ಸುಗಳನ್ನು ಬೆಸೆಯುವ ಪವಿತ್ರ ಮಾಸ. ಅದಕ್ಕೆ ಸಾಕ್ಷಿಯಾಗಿದೆ ನಾಲವಾರದ ಈ ಸಂಭ್ರಮ. ಈ ಪವಿತ್ರ ಮಾಸದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ಮನವಿ ಮಾಡಿದ್ದಾರೆ.

