ಒಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ತರಬೇತಿ ಮುಕ್ತಾಯ ಹಾಗೂ ವಿದ್ಯಾರ್ಥಿನಿಯರ ಕರಾಟೆ ಪ್ರದರ್ಶನ, ಹೆಣ್ಣೊಂದು ಕರಾಟೆ ಕಲಿತರೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಮೂಲಕ ಇಡೀ ಊರೇ ರಕ್ಷೀಸಿದಂತೆ: ಪರಸರೆಡ್ಡಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಹೆಣ್ಣೊಂದು ಕಲಿತರೆ ಇಡೀ ಮನೆ ಕಲಿತಂತೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಹಾಗೆ ಹೆಣ್ಣೊಂದು ಕರಾಟೆ ಕಲಿತರೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಮೂಲಕ ಇಡೀ ಊರೇ ರಕ್ಷೀಸಿದಂತಾಗುತ್ತದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ಮಾಜಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ ಹೇಳಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ತಾಲೂಕಾ ತೈಕೋಂಡೋ ಕರಾಟೆ ಅಸೋಸಿಯೇಷನ್ ಚಿತ್ತಾಪುರ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಾಡಿ ಟೌನ್, ಎಸ್.ಸಿ. 201 ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ತರಬೇತಿ ಮುಕ್ತಾಯ ಸಮಾರಂಭ ಹಾಗೂ ವಿದ್ಯಾರ್ಥಿನಿಯರ ಕರಾಟೆ ಪ್ರದರ್ಶನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈಚೆಗೆ ರಾಜ್ಯದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತ ಅತ್ಯಾಚಾರ ಘಟನೆಗಳು ನಡೆಯುತ್ತಿವೆ ಹೀಗಾಗಿ ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ಹಾಗೂ ಸ್ವಯಂ ರಕ್ಷಣೆಗಾಗಿ ಒಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ತರಬೇತಿ ನೀಡುತ್ತಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಹೇಳಿದರು.
ಚಿತ್ತಾಪುರ ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಹೀಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಪ್ರಗತಿ ಸಾಧಿಸಿ ಉನ್ನತ ಸ್ಥಾನಮಾನ ಪಡೆದು ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಈಗಿನ ಕಾಲದಲ್ಲಿ ಕರಾಟೆ ಕಲಿಯುವುದು ಬಹಳ ಅವಶ್ಯಕವಾಗಿದೆ ಇದು ಸ್ವಯಂ ರಕ್ಷಣೆಗೆ ವಿದ್ಯಾರ್ಥಿನಿಯರು ಯಾವುದೋ ಆಸೆ ಆಮಿಷಗಳಿಗೆ ಬಲಿಯಾಗಬೇಡಿ, ಯಾರಾದರೂ ತೊಂದರೆ ನೀಡುತ್ತಿದ್ದರೆ ಮಹಿಳಾ ಸಹಾಯವಾಣಿ 1098 ಹಾಗೂ ಪೊಲೀಸ್ ಸಹಾಯವಾಣಿ 112 ಗೆ ಕಾಲ್ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು.
ಪಿಎಸ್ಐ ತಿರುಮಲೇಶ್ ಮಾತನಾಡಿ, ಸ್ವಯಂ ರಕ್ಷಣೆಗೆ ಕರಾಟೆ ತುಂಬಾ ಸಹಾಯಕಾರಿ ಆಗಲಿದೆ ಹೀಗಾಗಿ ಎಲ್ಲ ವಿದ್ಯಾರ್ಥಿನಿಯರು ಕರಾಟೆ ಕಲಿಯುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕರುಣಾ ದೇವಿ ಮಾತನಾಡಿ, ಕರಾಟೆ ಮುಖ್ಯ ತರಬೇತುದಾರ ವಿಜಯಕುಮಾರ್ ಮತ್ತು ಅವರ ತಂಡದವರು ನಮ್ಮ ಶಾಲೆಯ ಮಕ್ಕಳಿಗೆ ಕರಾಟೆ ಚೆನ್ನಾಗಿ ಕಲಿಸಿದ್ದಾರೆ ಅಲ್ಲದೇ ತರಬೇತಿ ನೀಡಿದ್ದಾರೆ ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮಕ್ಕಳಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಿದ್ದೇನೆ ಎಂದು ಬಹಳ ಅಭಿಮಾನದಿಂದ ಮತ್ತು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ಎಂದರು.
ಕರಾಟೆ ಮುಖ್ಯ ತರಬೇತುದಾರ ವಿಜಯಕುಮಾರ್ ಹರವಾಳ್, ನಾಲವಾರ ಗ್ರಾಪಂ ಸದಸ್ಯ ಮೈಲಾರಿ ಮಳಬಾ, ಸಾಯಬಣ್ಣ ಕೆಳಗಿನಮನಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶಿವುಕುಮಾರ, ಸಂತೋಷ ಕಾಮಶೆಟ್ಟಿ, ಶ್ರೀದೇವಿ ಆಶಿಹಾಳ, ಸಂತೋಷಿ, ಶ್ರೀದೇವಿ, ಬೀರಣ್ಣ, ಗೀತಾ.ಬಿ, ಸ್ಮೀತಾ, ನಾದೀರಾಬೇಗಂ, ದತ್ತಪ್ಪ, ಮಿಲಿಂದ್, ದೀಪಿಕಾ, ಹೇಮಾ, ಕರಾಟೆ ತರಬೇತಿದಾರರಾದ ಸಂಜುಕುಮಾರ್ ಚೌದರಿ, ಸಾಬಯ್ಯ ಬೋಸಗಿ, ರಮೇಶ್ ಬೋಸಗಿ ಸೇರಿದಂತೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಅಸೋಸಿಯೇಷನ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂತೋಷ ಕಾಮಶೆಟ್ಟಿ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ ವಂದಿಸಿದರು. ನಂತರ ವಿದ್ಯಾರ್ಥಿನಿಯರ ಕರಾಟೆ ಪ್ರದರ್ಶನ ನಡೆಯಿತು.

