ಸರ್ಕಾರ ಘೋಷಿಸಿದ ಬೆಳೆಹಾನಿ ಪರಿಹಾರ ತಕ್ಷಣ ರೈತರ ಖಾತೆಗೆ ಜಮಾ ಮಾಡಲು: ಶಾಮರಾಯ ಸಂಗಾವಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅತಿವೃಷ್ಟಿಯಿಂದ ಬೆಳೆಹಾನಿಯಾದ ರೈತರಿಗೆ ಸರ್ಕಾರ ಘೋಷಿಸಿದ ಬೆಳೆಹಾನಿ ಪರಿಹಾರ ತಕ್ಷಣ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೂಡಿಹಳ್ಳಿ ಚಂದ್ರಶೇಖರ ಬಣ) ತಾಲೂಕು ಅಧ್ಯಕ್ಷ ಶಾಮರಾಯ ಸಂಗಾವಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿರುವ ಕಲಬುರಗಿಗೆ ಮುಖ್ಯಮಂತ್ರಿಗಳು ಆಗಮಿಸಿ ಅತಿಯಾದ ಮಳೆಯಿಂದ ರೈತರ ಬೆಳೆಗಳು ಸಂಪೂರ್ಣ ಹಾಳಾಗಿರುವುದನ್ನು ಕಣ್ಣಾರೆ ಕಂಡು ಪರಿಹಾರ ಘೋಷಣೆ ಮಾಡಿ ತಿಂಗಳಾದರೂ ಕೂಡ ಬಿಡಿಗಾಸು ಕೂಡ ರೈತರ ಖಾತೆಗೆ ಇನ್ನೂ ಜಮಾ ಆಗಿಲ್ಲ ಇದರಿಂದ ರೈತರ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ಈ ಭಾಗದ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದೆ ಅಲ್ಲದೇ ಅನೇಕ ಹಳ್ಳಿಗಳು ಪ್ರವಾಹಕ್ಕೆ ಸಿಲುಕಿ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ, ಹೀಗಾಗಿ ಅತಂತ್ರ ಸ್ಥಿತಿಯಲ್ಲಿದ್ದ ಸಂತ್ರಸ್ತರಿಗೆ ಹಾಗೂ ರೈತರ ಹಿತದೃಷ್ಟಿಯಿಂದ ವಿಳಂಬ ಮಾಡದೇ ದೀಪಾವಳಿ ಹಬ್ಬದ ಒಳಗಡೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬರುವ ಬೆಳಕಿನ ಹಬ್ಬ ದೀಪಾವಳಿ ರೈತರ ಜೀವನದಲ್ಲಿ ಬೆಳಕು ಉಂಟುಮಾಡುವ ನಿಟ್ಟಿನಲ್ಲಿ ಅವರು ಸಹ ಎಲ್ಲರಂತೆ ದೀಪಾವಳಿ ಸಂತೋಷದಿಂದ ಆಚರಿಸಬೇಕಾದರೆ ಕೂಡಲೇ ಪರಿಹಾರ ಹಣ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಹಿಂಗಾರು ಬಿತ್ತನೆಗೆ ರೈತರು ಬಿತ್ತನೆ ಬೀಜ, ಗೊಬ್ಬರ ಇನ್ನಿತರ ಖರ್ಚುಗಳಿಗಾಗಿ ಹಣ ಹೊಂದಿಸಲು ರೈತರು ಪರದಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಪರಿಹಾರ ಇನ್ನೂ ನಾಲ್ಕೈದು ದಿನಗಳ ಒಳಗಡೆ ಪರಿಹಾರವನ್ನು ಬಿಡುಗಡೆ ಮಾಡದೇ ಇದ್ದಲ್ಲಿ ರೈತರನ್ನು ಸಂಘಟಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

