Oplus_0

ಮನಸೂರೆಗೊಂಡ ಚಿಣ್ಣರ ಹಬ್ಬ ಸಾಂಸ್ಕೃತಿಕ ಉತ್ಸವ | ಶಿಕ್ಷಣದಿಂದಲೇ ಎಲ್ಲವೂ ಸಾಧ್ಯ: ಮರಿಯಪ್ಪ ಹಳ್ಳಿ 

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಸಮಾಜದ ಯಾವುದೇ ರಂಗದಲ್ಲಿ ಪ್ರಗತಿ ಅಥವಾ ಪರಿವರ್ತನೆ ಅಥವಾ ಸಾಧನೆ ಕಾಣಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ನಗರದ ಇಂಗಿನಶೆಟ್ಟಿ ಸಭಾಗೃಹದಲ್ಲಿ ನಡೆದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀಮತಿ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟ ಶಾಲೆ, ನಂದಗೋಕುಲ ಶಾಲೆ, ವಿಜಯ ಕಂಪ್ಯೂಟರ್ ತರಬೇತಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ನಡೆದ ಚಿಣ್ಣರ ಹಬ್ಬ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿಕ್ಷಣದಿಂದಲೇ ಎಲ್ಲವೂ ಸಾಧ್ಯ ಎಂದು ಹೇಳಿದರು.

ಮಕ್ಕಳಲ್ಲಿರುವ ಪ್ರತಿಭೆ ಮತ್ತು ಕಲಾಸಕ್ತಿಯನ್ನು ಹೊರಹಾಕಲು ಅವಕಾಶ ನೀಡಿದಾಗ ಮಾತ್ರ ಅವರಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಇಮ್ಮಡಿಯಾಗಿ ಸಾಧನೆ ಮಾಡುತ್ತಾರೆ ಎಂದು ಹೇಳಿದರು.

ಪರೀಕ್ಷೆ ಮತ್ತು ಅಂಕಕ್ಕಾಗಿ ಮಾತ್ರ ಅಧ್ಯಯನ ಸೀಮಿತವಾಗಿದ್ದು, ವಿದ್ಯಾರ್ಥಿಗಳು ಆ ಮಿತಿಯನ್ನು ದಾಟಿ ಜ್ಞಾನಕ್ಕಾಗಿ ಓದು ಎಂಬ ನಿಟ್ಟಿನಲ್ಲಿ ಬೆಳೆಯಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ-ನೀತಿಗಳು ಮತ್ತು ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ನಾಗೇಂದ್ರ ಬೇಲೂರ, ಶಾಲೆಯಲ್ಲಿಯ ವಿದ್ಯೆ ಕಲಿಕೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಅಡಗಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಮಕ್ಕಳಿಗೆ ವಿವಿಧ ಸ್ಪರ್ಧೆಯ ಮೂಲಕ ಚಿಣ್ಣರ ಹಬ್ಬ ಆಯೋಜಿಸಿ, ಕಲಿಕೆಯೊಂದಿಗೆ ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರಲಾಗುವುದು. ಈ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರ ಕರಣಿಕ, ಸಮೂಹ ಸಂಪನ್ಮೂಲ ವ್ಯಕ್ತಿ ಸತ್ಯನಾರಾಯಣ ವಿಶ್ವಕರ್ಮ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಕೇವಲ ಪಠ್ಯಗಳ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಲು ಮಕ್ಕಳನ್ನು ಪ್ರೇರೇಪಿಸಬೇಕು. ಹೀಗಾದಾಗ ಮಾತ್ರ ವಿದ್ಯಾರ್ಥಿ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ ಎಂದು ಹೇಳಿದರು.

ನಗರಸಭೆ ಸದಸ್ಯ ಡಾ.ಅಹ್ಮದ ಪಟೇಲ್ ಮಾತನಾಡಿದರು. ಉದ್ಯಮಿ ಅಣವೀರ ಇಂಗಿನಶೆಟ್ಟಿ ಅಧ್ಯಕ್ಷತೆ ವಹಿಸಿದರು. ಅಡತ ಹಾಗೂ ದಾಲ್‌ಮಿಲ್ ಸಂಘದ ಅಧ್ಯಕ್ಷ ಪ್ರಶಾಂತ ಮರಗೋಳ, ಎಪಿಎಮ್‌ಸಿ ಸದಸ್ಯ ವಿಶ್ವರಾಧ್ಯ ಬಿರಾಳ, ಉದ್ಯಮಿಗಳಾದ ಶಿವಕುಮಾರ ಇಂಗಿನಶೆಟ್ಟಿ, ಅನಿಲ ಜಾನ್, ಬ್ರಹ್ಮಕುಮಾರಿ ಜಯಶ್ರೀ ಅಕ್ಕಾ, ಸಮಾಜ ಸೇವಕಿ ವಿಜಯಲಕ್ಷ್ಮಿ ಇಂಗಿನಶೆಟ್ಟಿ, ಯೋಗ ಶಿಕ್ಷಕ ಮೋಹನ ಘಂಟ್ಲಿ, ವಾಸು ಚವ್ಹಾಣ ಅವರು ವೇದಿಕೆಯಲ್ಲಿದ್ದರು.

ವಿಜ್ಞಾನ, ಗಣಿತ, ಚಿಂತನಾ ಪರೀಕ್ಷೆಯಲ್ಲಿ ತಾಲೂಕು, ಜಿಲ್ಲಾ ರಾಜ್ಯಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಾನಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪುಟಾಣಿ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನಸೂರೆಗೊಳಿಸಿತು.

ಶಿಕ್ಷಕಿಯಾರಾದ ಕಾಳಿಕಾ ಪಾಟೀಲ್, ಸುಧಾರಾಣಿ ಚವ್ಹಾಣ್ ನಿರೂಪಿಸಿದರು, ಮಲಮ್ಮ ಮೀರಾಸ್ಕರ ಸ್ವಾಗತಿಸಿದರು, ಸವಿತಾ ಬೆಳಗುಂಪಿ ವರದಿ ವಾಚಿಸಿದರು, ಅಂಬಿಕಾ ಜಿಂಗಾಡೆ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!