ಅಖಿಲ ಭಾರತ‌ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಸಂತಾಪ

ನಾಗಾವಿ ಎಕ್ಸಪ್ರೆಸ್ 

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಸಚಿವ ಹಾಗೂ ಶಿವಶಂಕರಪ್ಪನವರ ಮಗನಾದ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಕಳಿಸಿದ ಶೋಕ‌ ಸಂದೇಶದಲ್ಲಿ ಖರ್ಗೆ ಅವರು, ಶಾಮನೂರು ಅವರೊಂದೊಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದ್ದಾರೆ.

1972 ರಲ್ಲಿ ತಾವು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಗಿನಿಂದ ಹಿಡಿದು ಇಲ್ಲಿಯವರೆಗೆ ಶಾಮನೂರು ಅವರೊಂದಿಗೆ ರಾಜಕೀಯ ಹೊರತಾಗಿ ವೈಯಕ್ತಿಕವಾಗಿ ಬಾಂಧವ್ಯ ಬೆಳೆದಿತ್ತು. ಶ್ರೀಯುತರ ನಿಧನ ನನಗೆ ವೈಯಕ್ತಿಕವಾಗಿ ಅಪಾರ ದುಃಖವಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಶಾಸಕರಾಗಿ, ಸಚಿವರಾಗಿ ಹಾಗೂ ಸಂಸದರಾಗಿ ಶಾಮನೂರು ಶಿವಶಂಕರಪ್ಪ ಅವರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದರು. ಸಾರ್ವಜನಿಕ ಸೇವೆಯ ಜೊತೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಹಾಗೂ ಬಾಪುಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸುದೀರ್ಘ ಕಾಲ ಸಮಾಜದ ಸೇವೆಗೈದು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೂಲತಃ ಪರೋಪಕಾರಿಯಾಗಿದ್ದ ಶ್ರೀಯುತರು ಯಾವುದೇ ಫಲಾಪೇಕ್ಷೆ‌ ಇಲ್ಲದೇ ಸಹಾಯ ಮಾಡುತ್ತಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ದಿವಂಗತರ ಗುಣಗಾನ ಮಾಡಿದ್ದಾರೆ.

ಶಾಮನೂರು ಶಿವಶಂಕರಪ್ಪನವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕೆಲ ವಾರಗಳ ಹಿಂದೆ ಅವರನ್ನು ಭೇಟಿ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿದ್ದೆ. ಆಗಲೂ ಕೂಡಾ ಅವರು ಸಮಾಜದ, ಸಾರ್ವಜನಿಕರ‌ ಬಗ್ಗೆ ಕಾಳಜಿ ತೋರಿಸಿದ್ದರು.

ಅವರ ನಿಧನಕ್ಕೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವತಿಯಿಂದ ಹಾಗೂ ವೈಯಕ್ತಿಕವಾಗಿ ನನ್ನ ಸಂತಾಪಗಳು. ಇಂತಹ ಕಠಿಣ‌ ಸಂದರ್ಭದಲ್ಲಿ ನಾನು ಹಾಗೂ ಕಾಂಗ್ರೆಸ್ ಪಕ್ಷ ನಿಮ್ಮ ಜೊತೆಗೆ ಇರುತ್ತದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಶೋಕ ಸಂದೇಶದ ಪತ್ರದಲ್ಲಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!