ಶ್ರೀ ಏಕದಂತ ಯುವ ಮಿತ್ರ ಮಂಡಳಿ ವತಿಯಿಂದ 15ನೇ ಗಣೇಶೋತ್ಸವ | ಎಲ್ಲಾ ದೇವರುಗಳಲ್ಲಿ ಸರ್ವಶ್ರೇಷ್ಠ ದೇವರು ಗಣಪತಿ: ಕಂಬಳೇಶ್ವರ ಶ್ರೀ ಅಭಿಮತ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರತಿಯೊಂದು ಪೂಜೆ ಕಾರ್ಯಕ್ರಮಗಳಲ್ಲಿ ಗಣಪತಿಗೆ ಮೊದಲ ಪೂಜೆ ಸಲ್ಲುತ್ತದೆ, ಹೀಗಾಗಿ ಎಲ್ಲಾ ದೇವರುಗಳಲ್ಲಿ ಸರ್ವಶ್ರೇಷ್ಠ ದೇವರು ಗಣಪತಿ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶರಣ ನಗರದಲ್ಲಿ ಶ್ರೀ ಏಕದಂತ ಯುವ ಮಿತ್ರ ಮಂಡಳಿ ವತಿಯಿಂದ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ 15ನೇ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಣೇಶ್ ಪ್ರತಿಷ್ಠಾಪನೆಯಿಂದ ವಿಸರ್ಜನೆ ಮಾಡುವವರೆಗೂ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದಾಗ ಮಾತ್ರ ಗಣಪತಿಯ ಕೃಪಾಶೀರ್ವಾದ ಆಗಲಿದೆ ಎಂದು ಆಶೀರ್ವಚನ ನೀಡಿದರು. ಮೊದಲು ಗುಣದಿಂದ ಗುಣಪತಿಯಾಗಬೇಕು ಅಂದಾಗ ಮಾತ್ರ ಗಣಪತಿಯ ಪೂಜೆ ಮಾಡುವುದಕ್ಕೂ ಸಾರ್ಥಕ ಆಗಲಿದೆ ಎಂದು ಕಿವಿಮಾತು ಹೇಳಿದರು.
ಗಣೇಶ್ ಉತ್ಸವಕ್ಕೆ ಅಗಾಧವಾದ ಇತಿಹಾಸ ಇದೆ. ಹೀಗಾಗಿ ಎಲ್ಲರೂ ಸಡಗರ ಸಂಭ್ರಮದಿಂದ ಎಲ್ಲಾರೂ ಸೇರಿ ಆಚರಿಸುತ್ತಾರೆ. ಕೊನೆಯ ದಿನದಲ್ಲಿ ಗಣಪತಿಯ ಮೆರವಣಿಗೆ ಹಾಗೂ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಯುವಕರು ಸ್ವಲ್ಪ ಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಮೆರವಣಿಗೆ ಸಮಯದಲ್ಲಿ ವಿದ್ಯುತ್ ತಂತಿಗಳ ಕಡೆ ಲಕ್ಷ ಕೊಡಬೇಕು ಹಾಗೂ ಬಾವಿ, ನದಿಯಲ್ಲಿ ವಿಸರ್ಜನೆ ಮಾಡುವಾಗ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಗಣೇಶೋತ್ಸವ ಮಾಡುತ್ತಾ ಜನರಲ್ಲಿ ಏಕತೆ, ಒಗ್ಗಟ್ಟು ಹಾಗೂ ರಾಷ್ಟ್ರೀಯ ಭಾವನೆ ಮೂಡಿಸುತ್ತಿರುವ ಶ್ರೀ ಏಕದಂತ ಯುವ ಮಿತ್ರ ಮಂಡಳಿಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಲ್ ಗಂಗಾಧರ್ ತಿಲಕ್ ಅವರು ಜನರಲ್ಲಿ ಒಗ್ಗಟ್ಟು ಹಾಗೂ ಸ್ವಾತಂತ್ರ್ಯ ಚಳುವಳಿಯ ಕಿಚ್ಚನ್ನು ಹೊತ್ತಿಸಲು ಗಣೇಶ್ ಉತ್ಸವವನ್ನು ಸಾರ್ವಜನಿಕವಾಗಿ ಜಾರಿಗೆ ತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜನರಲ್ಲಿ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಮತ್ತು ಉತ್ತಮ ಸಂಬಂಧಗಳನ್ನು ಏರ್ಪಡಿಸುವಲ್ಲಿ ಗಣೇಶ್ ಚತುರ್ಥಿ ಸೇರಿದಂತೆ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತಿವೆ ಹಾಗೂ ದೇಶ ವಿದೇಶಗಳಲ್ಲಿ ಜ್ಯಾತ್ಯಾತೀತವಾಗಿ ಎಲ್ಲರೂ ಆಚರಿಸುವ ಏಕೈಕ ಹಬ್ಬ ಅದು ಗಣಪತಿ ಹಬ್ಬ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯ ರಸೂಲ್ ಮುಸ್ತಫಾ, ಮಾಜಿ ಸದಸ್ಯ ಶಿವಾಜಿ ಕಾಶಿ, ಮೊಗಲಾ ಗ್ರಾಪಂ ಮಾಜಿ ಅಧ್ಯಕ್ಷ ತಮ್ಮಣ್ಣ ಡಿಗ್ಗಿ ವೇದಿಕೆಯಲ್ಲಿ ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಸಾಬಣ್ಣ ದೊಡ್ಡಮನಿ, ವಿಶ್ವನಾಥ ಸ್ವಾಮಿ, ವಿಶ್ವನಾಥ ಬಿರಾದಾರ, ಯಲ್ಲಯ್ಯ ಕಲಾಲ್, ಆಕಾಶ್ ಬಿರಾದಾರ, ನಿತೀಶ್ ಕಲಾಲ್, ಪ್ರಿತಮ್ ಮಡಿವಾಳ, ಉಮೇಶ್ ಕಲಾಲ್, ನಾಗರಾಜ್ ತಳ್ಳಿ, ಮಲ್ಲಿಕಾರ್ಜುನ ತಳ್ಳಿ, ರಾಜು ಕಲಾಲ್, ಶ್ವೇತಾ ದೊಡ್ಡಮನಿ, ಸಿದ್ದಣ್ಣಗೌಡ, ಕಿರಣ್ ಮಡಿವಾಳ, ಲಕ್ಷ್ಮಣ್ ತಳ್ಳಿ, ಪ್ರಶಾಂತ್ ಮಡಿವಾಳ, ದೇವಿಂದ್ರ ಕಲಾಲ್, ಬಸ್ಸು ಸ್ವಾಮಿ, ಅಭಿಷೇಕ್ ಕೆಮದಾರ್, ಬಸ್ಸು ಉಪ್ಪಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸ್ವಾತಿ ಸ್ಪರ್ದೆಗಳ ವಿಜೇತರ ಪಟ್ಟಿ ವಾಚಿಸಿದರು, ನಾಗಮ್ಮ ಕಲಾಲ್ ಸ್ವಾಗತಿಸಿದರು, ಲಕ್ಷ್ಮೀ ಸ್ವಾಮಿ ನಿರೂಪಿಸಿದರು, ಉಮಾದೇವಿ ಮಡಿವಾಳ ವಂದಿಸಿದರು.

