ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ನೂತನ ಸಮಿತಿ ಘೋಷಣೆ | ಸರ್ಕಾರದ ನೀತಿಯಿಂದ ಶಿಕ್ಷಣ, ಅರೋಗ್ಯ ಕ್ಷೇತ್ರಕ್ಕೆ ಕೊಡಲಿಪೆಟ್ಟು: ರಾಜಶೇಖರ್
ನಾಗಾವಿ ಎಕ್ಸಪ್ರೆಸ್
ವಾಡಿ: ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳು ಜಾರಿಯಾದಾಗಿನಿಂದ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಕೊಡಲಿಪೆಟ್ಟು ಬಿದ್ದಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ್ ಹೇಳಿದರು.
ದುಡ್ಡಿದ್ದವರಿಗೆ ಮಾತ್ರ ಅರೋಗ್ಯ ಮತ್ತು ಶಿಕ್ಷಣ ಎನ್ನುವಂತಾಗಿದೆ. ಇದರ ವಿರುದ್ದ ಪ್ರಬಲ ಹೋರಾಟ ಮಾಡಿದರೆ ಮಾತ್ರ ನಮ್ಮಗಳ ಭವಿಷ್ಯಕ್ಕೆ ಉಳಿಗಾಲ
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವಾಡಿ ಘಟಕದ ವತಿಯಿಂದ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಶಾಲೆಯ ಸಭಾಂಗಣದಲ್ಲಿ ನಡೆದ ಜನಪರ ಶಿಕ್ಷಣ ನೀತಿಗಾಗಿ ಜನ ಸಂಸತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದುಡ್ಡಿದ್ದವರಿಗೆ ಮಾತ್ರ ಅರೋಗ್ಯ ಮತ್ತು ಶಿಕ್ಷಣ ಎನ್ನುವಂತಾಗಿದೆ. ಇದರ ವಿರುದ್ದ ಪ್ರಬಲ ಹೋರಾಟ ಮಾಡಿದರೆ ಮಾತ್ರ ನಮ್ಮಗಳ ಭವಿಷ್ಯಕ್ಕೆ ಉಳಿಗಾಲ ಎಂದರು.
ಕೆಪಿಎಸ್ ಮ್ಯಾಗ್ನೇಟ್ ಶಾಲೆ ಹೆಸರಲ್ಲಿ ರಾಜ್ಯದ 40 ಸಾವಿರ ಶಾಲೆಗಳ ಮರಣಹೋಮ ನಡೆಸಲು ಹೊರಟಿರುವ ಸರ್ಕಾರದ ಷಡ್ಯಂತ್ರ ಸೋಲಿಸಲು ಜನತೆ ಹೋರಾಟದ ಕಣಕ್ಕೆ ಧುಮುಕಬೇಕು ಎಂದು ಕರೆ ನೀಡಿದರು.
ಪ್ರತಿ ಪಂಚಾಯತಿಗೊಂದರಂತೆ 6 ಸಾವಿರ ಕೆಪಿಎಸ್ ಶಾಲೆ ತೆರೆದು ಅವುಗಳ ನಿರ್ವಹಣೆ ಖಾಸಗಿಯವರಿಗೆ ನೀಡಲಾಗುವುದು ಎಂದು ಸರ್ಕಾರ ಬಹಿರಂಗವಾಗಿ ಹೇಳಿದ್ದು, ಲಕ್ಷಾಂತರ ಶಿಕ್ಷಕರ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಅಮೇರಿಕದಲ್ಲಿ ವಿಫಲವಾಗಿರುವ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಲು ಹೊರಟಿರುವುದು ಅತ್ಯಂತ ಜನದ್ರೋಹದ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಲಿಯಲು ಕಾಸು ಕೊಡು ಇಲ್ಲದಿದ್ದರೆ ಅಜ್ಞಾನಿಯಾಗು ಎನ್ನುವಂತಹ ಇಂತಹ ದುಷ್ಟ ತೀರ್ಮಾನ ಸೋಲಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪುರ ಮಾತನಾಡಿ, ಎನ್ ಪಿ ಎಸ್ ತೆಗೆದು ಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಅವುಗಳನ್ನು ಯಥಾವತ್ತಾಗಿ ಮತ್ತಷ್ಟು ಕರಾಳವಾಗಿ ಜಾರಿ ಮಾಡುತ್ತಿದೆ, ಇದು ಜನತೆಗೆ ಮಾಡುತ್ತಿರುವ ವಂಚನೆಯ ಕೆಲಸವಾಗಿದೆ. ಜನರಿಗೆ ಅನ್ಯಾಯ ಮಾಡುವಲ್ಲಿ ಮತ್ತು ಬೀದಿಗೆ ತರುವಲ್ಲಿ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಹಿಂದೆ ಬಿದ್ದಿಲ್ಲ. ನಾಗರೀಕ ಹಕ್ಕುಗಳಿಗಾಗಿ ಜನಹೋರಾಟ ಬೆಳೆದು ದುಷ್ಟ ರಾಜಕಾರಣ ಸೋಲಿಸಬೇಕು. ಮಹಾನ್ ಸ್ವಾತಂತ್ರ ಹೋರಾಟಗಾರರು ಕಂಡು ಕನಸಿನ ಭಾರತ ನಿರ್ಮಾಣವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಸದಸ್ಯೆ ಪದ್ಮರೇಖಾ ಆರ್ ಕೆ ಮಾತನಾಡಿ, ಸರ್ಕಾರಗಳೇ ಜನರನ್ನು ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ದಬ್ಬುವ ಹಾಗೇ ಮಾಡಿ ದಾಖಲಾತಿ ಕುಸಿಯುವಂತೆ ಮಾಡಿದ್ದು ಈಗ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹರಾಜಿಗೆ ಇಡಲಾಗುತ್ತಿದೆ ಎಂದು ಕಿಡಿಕಾರಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ ಜಿ ಮಾತನಾಡಿದರು. ಶರಣಕುಮಾರ ದೋಶೆಟ್ಟಿ ಸ್ವಾಗತಿಸಿದರೆ ಸೀತಾ ಹೇರೂರ ನಿರೂಪಿಸಿದರು. ಸಾಯಬಣ್ಣ ನಾಟೇಕಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಈರಣ್ಣ ಯಲಗಟ್ಟಿ, ಸಾಯಬಣ್ಣ ನಾಟೇಕಾರ, ಶೇಖ್ ಅಲ್ಲಾಭಕ್ಷ, ರಜನಿ ಪಾಟೀಲ, ಶರಣು ಹೆರೂರು, ಕವಿತಾ ಪಾಟೀಲ, ರಾಜೇಶ್ವರಿ ಇಸಾಫ, ಭೀಮರೆಡ್ಡಿ, ಅಶೋಕ ಹೂಗಾರ, ಈರಣ್ಣ ನಾಟೇಕರ, ಶ್ರೀದೇವಿ ಮಲಕಂಡಿ, ಶರಣಮ್ಮ ಪಾಟೀಲ, ಸುಜಾತ ಸರಡಗಿ, ಸಿದ್ದಮ್ಮ ಬುಕ್ಕಾ, ಮಹಾದೇವಿ ಪಾಟೀಲ, ಭಾಗ್ಯಶ್ರೀ ಅಲ್ಲಿಪುರ, ರೇಣುಕಾ ನಾಲವಾರ, ಅರುಣ ಛತ್ರಿಕಿ, ಅಂಬಿಕಾ ಪಾಟೀಲ ಹಾಗೂ ಇನ್ನಿತರರು ಇದ್ದರು.
ನೂತನ ಸಮಿತಿ ರಚನೆ : ಇದೇ ಸಂದರ್ಭದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ವಾಡಿ ನೂತನ ಸಮಿತಿ ರಚಿಸಲಾಯಿತು.
ರಮೇಶ ಮಾಶಾಳಕರ (ಅಧ್ಯಕ್ಷ) ಸಾಯಬಣ್ಣ ನಾಟೆಕಾರ (ಉಪಾಧ್ಯಕ್ಷ) ಶರಣುಕುಮಾರ ದೋಶೆಟ್ಟಿ, (ಕಾರ್ಯದರ್ಶಿ) ಸದಸ್ಯರಾಗಿ ಪದ್ಮರೇಖಾ ಆರ್ ಕೆ ಸೀತಾಬಾಯಿ ಹೆರೂರು, ಶ್ರೀಶರಣ, ಗೋದಾವರಿ ಕಾಂಬ್ಳೆ, ಜಯಶ್ರೀ ರಾಠೋಡ, ಶ್ರೀದೇವಿ ಮಲಕಂಡಿ, ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಅಶೋಕ ಹೂಗಾರ ಭೀಮರೆಡ್ಡಿ, ಕವಿತಾ ಪಾಟೀಲ ಒಳಗೊಂಡ ನೂತನ ಸಮಿತಿ ಆಯ್ಕೆ ಮಾಡಲಾಯಿತು.

