Oplus_0

ಸಿಸಿ ರಸ್ತೆ ನಿರ್ಮಾಣಕ್ಕೆ 8.20 ಕೋಟಿ ಅನುದಾನ ಬಿಡುಗಡೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೆನೆಗುದಿಗೆ |  ವಾಡಿ-ಇಂಗಳಗಿ ಸಿಸಿ ರಸ್ತೆ ಕಾಮಗಾರಿಗೆ ಗ್ರಹಣ: ಜನರ ಆಕ್ರೋಶ

ನಾಗಾವಿ ಎಕ್ಸಪ್ರೆಸ್

ವಾಡಿ: ಬಿರುಕು ಬಿಟ್ಟ ರಸ್ತೆ ಮಾರ್ಗದಲ್ಲಿ ದಿನನಿತ್ಯ ಪ್ರಯಾಣಿಕರು ಪರದಾಡುವಂತಾಗಿದೆ, ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರೂ ಇನ್ನೂ ಕಾಮಗಾರಿ ಆರಂಭಿಸದ ಪರಿಣಾಮ ಕಾಮಗಾರಿಗೆ ಗ್ರಹಣ ಹಿಡಿದಂತಾಗಿದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಪಟ್ಟಣ ಸಮೀಪದ ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಸಂಪೂರ್ಣ ಹದಗೆಟ್ಟಿದೆ. ಸುಮಾರು 50 ವರ್ಷದ ಹಿಂದೆ ಎಸಿಸಿ ಸಿಮೆಂಟ್ ಕಂಪನಿಯಿಂದ ರಸ್ತೆ ನಿರ್ಮಾಣ ಮಾಡಲಾಗಿತ್ತು. ರಸ್ತೆ ಮಾರ್ಗದಲ್ಲಿ 1 ಕಿ.ಮೀ ವರೆಗೆ ರಸ್ತೆ ಬಿರುಕು ಬಿಟ್ಟು, ಹೆಜ್ಜೆಗೊಂದು ಕಂದಕ ಸೃಷ್ಟಿಯಾಗಿ, ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿದೆ. ದಿನನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ. ಮಕ್ಕಳು ಮನೆಗೆ ತಲುಪುವರೆಗೆ ಪೋಷಕರು ಭಯದಲ್ಲೇ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗಿದೆ.

ಪಟ್ಟಣದಿಂದ ಇಂಗಳಗಿ, ಶಹಾಬಾದ್ ಮಾರ್ಗವಾಗಿ ಜಿಲ್ಲೆಗೆ ಇದೇ ರಸ್ತೆ ಮಾರ್ಗದಿಂದಲೇ ದಿನನಿತ್ಯ ನೂರಾರು ವಾಹನ ಸವಾರರು ಸಂಚರಿಸುತ್ತಾರೆ. ಆದರೆ ರಸ್ತೆ ಹದಗೆಟ್ಟ ಪರಿಣಾಮ ಅಪಘಾತ ಸಂಭವಿಸಿ, ಪ್ರಯಾಣಿಕರು ಕಾಲು ಮುರಿದುಕೊಂಡು ಅಂಗವೈಕಲ್ಯತೆಗೆ ತುತ್ತಾದ ಘಟನೆ ನಡೆದಿವೆ.

ಮಕ್ಕಳ ಕನಸು ಕಂಡ ಅದೆಷ್ಟೋ ಮಹಿಳೆಯರಿಗೆ ಹದಗೆಟ್ಟ ರಸ್ತೆಯಿಂದ ಮಾರ್ಗ ಮಧ್ಯೆದಲ್ಲೇ ಭ್ರೂಣ ಹತ್ಯೆಯಾಗಿದೆ. ಅವರ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಂಗಳಗಿ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಳೆದ ವರ್ಷ ರಸ್ತೆ ನಿರ್ಮಾಣಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಹಾಗೆ ಬೆಂಗಳೂರಿಗೆ ಹೋಗಿ ಕೂಡ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿಯಾಗಿ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದ್ದರು.

ಪರಿಣಾಮ ಕಳೆದ ವರ್ಷ ಎಸಿಸಿ ಸಿಮೆಂಟ್ ಕಂಪನಿ ವತಿಯಿಂದ ಸುಮಾರು 39 ಲಕ್ಷ ರೂಪಾಯಿ ವೆಚ್ಚದಲ್ಲಿ ಬಿರುಕು ಬಿಟ್ಟ ರಸ್ತೆ ದುರಸ್ತಿ ಮಾಡಲಾಗಿತ್ತು. ಆದರೆ ರಸ್ತೆ ದುರಸ್ತಿ ಮಾಡಿ 9 ತಿಂಗಳಲ್ಲಿಯೇ ಪುನಾ ರಸ್ತೆ ಬಿರುಕು ಬಿಟ್ಟು, ಸಂಪೂರ್ಣ ಹಾಳಾಗಿದೆ.

ಪರಿಣಾಮ ಗ್ರಾಮಸ್ಥರ ನೋವಿಗೆ ಸ್ಪಂದಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಶ್ವತ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಸುಮಾರು 8.20 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ, ಕಳೆದ ವರ್ಷದ ಹಿಂದೆಯೇ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಗಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿ, ದಿವ್ಯ ನಿರ್ಲಕ್ಷ್ಯದಿಂದ ಇನ್ನೂ ಕಾಮಗಾರಿ ಆರಂಭವಾಗದೇ ದಿನನಿತ್ಯ ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.

ಇಂಗಳಗಿ ಸಿಸಿ ರಸ್ತೆ ಕಾಮಗಾರಿ ಉದ್ಘಾಟನೆಯಿಂದ ಜನರಲ್ಲಿ ಸಂತಸ ಮನೆ ಮಾಡಿತ್ತು. ಆದರೆ ವರ್ಷ ಕಳೆದರೂ ಇನ್ನೂ ಕಾಮಗಾರಿ ಆರಂಭಿಸದಿರುವುದು ಬೇಸರ ತಂದಿದೆ. ಅಧಿಕಾರಿಗಳು ದಿನಕ್ಕೊಂದು ಸಬೂಬು ಹೇಳುತ್ತಿದ್ದಾರೆ. ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಮತ್ತೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಶೀನಾಥ್ ಚನ್ನಗುಂಡ, ಚಂದ್ರಕಾಂತ ಹೂಗಾರ ಅವರು ಎಚ್ಚರಿಕೆ ನೀಡಿದ್ದಾರೆ.

“ವಾಡಿ ಪಟ್ಟಣದಿಂದ ಇಂಗಳಗಿ ಗ್ರಾಮದವರೆಗೆ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಸುಮಾರು 8.2 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ತಾಂತ್ರಿಕ ಕಾರಣದಿಂದ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಆದರೆ ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ. ಅಗಸ್ಟ್ ತಿಂಗಳಲ್ಲಿ ಕಾಮಗಾರಿ ಆರಂಭಿಸಿ, ಶೀಘ್ರದಲ್ಲೇ ಗುಣಮಟ್ಟ ಹೊಸ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ”.-ಶ್ಯಾಮ್ ಬಿರಾದಾರ ಪಿ.ಎಮ್.ಜಿ.ಎಸ್’ವೈ. ಎಇಇ.

Spread the love

Leave a Reply

Your email address will not be published. Required fields are marked *

You missed

error: Content is protected !!