ಶ್ರೀ ಸಿಮೆಂಟ್ ಕಂಪನಿ ಅಧಿಕಾರಿಗೆ ಮನವಿ | ರೈತರ ಜಮೀನು ಖರೀದಿ ಸೇರಿದಂತೆ ಡೋಣಗಾಂವ ಗ್ರಾಮದ ಬೇಡಿಕೆಗಳ ಈಡೇರಿಸದಿದ್ದರೆ ಮೂರು ದಿನಗಳಲ್ಲಿ ರಸ್ತೆ ತಡೆ ಪ್ರತಿಭಟನೆ ರೈತರು ಎಚ್ಚರಿಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಜಮೀನು ಸರ್ವೆ ನಂ:422/3,5 ಎಕರೆ 32 ಗುಂಟೆ ಜಮೀನು ಶ್ರೀ ಸಿಮೆಂಟ್ ಕಂಪನಿಗೆ ಹೊಂದಿಕೊಂಡಿದ್ದು, ಕಂಪನಿಯಿಂದ ಬರುವಂತಹ ದೂಳಿನಿಂದ ಜಮೀನಿನಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶವಾಗುತ್ತಿದ್ದು, ಕಾರಣ ಸದರಿ ಜಮೀನನ್ನು ಬರುವ ಮೂರು ದಿನಗಳಲ್ಲಿ ಖರೀದಿ ಮಾಡಬೇಕು ಹಾಗೂ ಡೋಣಗಾಂವ ಗ್ರಾಮದ ಬೇಡಿಕೆಗಳಿಗೆ ಈಡೇರಿಸದಿದ್ದರೆ ಶ್ರೀ ಸಿಮೆಂಟ್ ವ್ಯಾಪ್ತಿಯ ಡೋಣಗಾಂವ ಸಿಸಿ ರಸ್ತೆಯಲ್ಲಿ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡ ಕಾಶಪ್ಪ ಡೋಣಗಾಂವ ಎಚ್ಚರಿಸಿದರು.
ಈ ಕುರಿತು ಶ್ರೀ ಸಿಮೆಂಟ್ ಕಂಪನಿ ಹೆಚ್ಆರ್ ಹೆಡ್ ಅನೀಲ್ ತಿಪ್ಲೆ ಅವರಿಗೆ ರೈತರೊಂದಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದ ಅವರು, ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಜಮೀನು ಸರ್ವೆ ನಂ:422/3, 5 ಎಕರೆ 32 ಗುಂಟೆ ಜಮೀನು ಶ್ರೀ ಸಿಮೆಂಟ್ ಕಂಪನಿಗೆ ಹೊಂದಿಕೊಂಡಿದ್ದು, ಕಂಪನಿಯಿಂದ ಬರುವಂತಹ ದೂಳಿನಿಂದ ಜಮೀನಿನಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶವಾಗುತ್ತಿದ್ದು, ಕೃಷಿ ಮಾಡಲು ಯೋಗ್ಯವಾಗಿರುವುದಿಲ್ಲ. ಕಂಪನಿಯಿಂದ ಹೊರಬರುವ ದೂಳಿನಿಂದ ಬೆಳೆದ ಬೆಳೆಯೂ ಕೈಗೆ ಬರುತ್ತಿಲ್ಲ, ಇತ್ತ ಕಂಪನಿಯವರು ಜಮೀನನ್ನು ಖರೀದಿ ಕೂಡ ಮಾಡುತ್ತಿಲ್ಲ, ಇದರ ನಡುವೆ ರೈತ ಕುಟುಂಬ ಸಂಕಷ್ಟದಲ್ಲಿದೆ, ಆದರೆ 2 ಕೀ.ಮೀ ದೂರ ಇರುವ ಸರ್ವೆ ನಂ-1021/1, 1ಎಕರೆ 36 ಗುಂಟೆ 10,60,59,375 ರೂಪಾಯಿಗೆ, ರೈತರ ಜಮೀನು ಖರಿದಿಸುವ ಮೂಲಕ ತಾರತಮ್ಯ ಮಾಡಿದೆ. ಈ ನಿಟ್ಟಿನಲ್ಲಿ ಶ್ರೀ ಸಿಮೆಂಟ್ ಕಂಪನಿ ರೈತನ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಹೀಗಾಗಿ ಬರುವ ಮೂರು ದಿನಗಳಲ್ಲಿ ಜಮೀನು ಖರೀದಿ ಮಾಡಬೇಕು, ಇಲ್ಲದಿದ್ದರೆ ಕುಟುಂಬಸಮೇತ ಹಾಗೂ ರೈತರೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಮೀನು ಖರೀದಿ ಮಾಡುವಂತೆ ಈ ಹಿಂದೆ ಕಂಪನಿಯವರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಇಲ್ಲಿವರೆಗೆ ಜಮೀನು ಖರೀದಿ ಕುರಿತು ಕಂಪನಿಯವರು ಯಾವುದೇ ಸೂಕ್ತ ಉತ್ತರ ನೀಡದೇ ನಿರ್ಲಕ್ಷಿಸಿದ್ದಾರೆ. ಹೀಗಾಗಿ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಆದ್ದರಿಂದ ಕೂಡಲೇ ರೈತರ ಜಮೀನು ಖರೀದಿ ಮಾಡಿ ಕುಟುಂಬ ನಿರ್ವಹಣೆಗೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಶ್ರೀ ಸಿಮೆಂಟ್ ಕಂಪೆನಿಯ ವ್ಯಾಪ್ತಿಯಲ್ಲಿ ದೂಳಿನಿಂದ ಹಾಳಾಗುವ ರೈತರ ಜಮೀನು ಖರೀದಿ ಮಾಡಬೇಕು, ಕಂಪೆನಿಯಿಂದ ಹೊರಬರುವ ದೂಳಿನಿಂದ ಜನರ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ, ಇದನ್ನು ನಿಯಂತ್ರಣ ಮಾಡಬೇಕು, ಕಂಪನಿಯಿಂದ ಹೊರಬರುವ ದೂಳಿನಿಂದ ಹಾನಿಯಾದ ರೈತರ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು, ಕಂಪೆನಿಯಿಂದ ಹೊರಬರುವ ವಾಯು ಮಾಲಿನ್ಯದಿಂದ ದುರ್ನಾತ ಬರುತ್ತಿದೆ ಇದರಿಂದ ಜನರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಆದ್ದರಿಂದ ಇದನ್ನು ನಿಯಂತ್ರಿಸಬೇಕು, ಕಂಪೆನಿಯ ಸಮೀಪದಿಂದ ಡೋಣಗಾಂವ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಹೀಗಾರಿ ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕು, ಶ್ರೀ ಸಿಮೆಂಟ್ ಕಂಪೆನಿಯ ವ್ಯಾಪ್ತಿಯ ಡೋಣಗಾಂವ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳು ಒದಗಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಂಪೆನಿ ಹೆಚ್ಆರ್ ರಾಮಣ್ಣಗೌಡ, ಡೋಣಗಾಂವ ಗ್ರಾಮದ ಮುಖಂಡರಾದ ಶರಣಪ್ಪ ಹೊನ್ನಪೂರ, ಬಸವರಾಜ ಪೂಜಾರಿ, ಕಾಶಪ್ಪ ಸಣ್ಣಮನಿ, ಮಲ್ಲಪ್ಪ ಮುತ್ತಗಿ, ಸಿದ್ರಾಮ ಮೆಂಗನೂರ, ಕಾಶಪ್ಪ ಬಣ್ಣರ್, ದೇವಿಂದ್ರಪ್ಪ ಹೊನ್ನಪೂರ, ಕಾಶಪ್ಪ ರಟಗಲ್, ನಾಗಪ್ಪ ಹೊನ್ನಪೂರ, ಭೀಮರಾಯ ಹೆಗಲೇರಿ, ಸಾಬಣ್ಣ ಜಡಿ ಸೇರಿದಂತೆ ಇತರರು ಇದ್ದರು.

