Oplus_131072

ಪತ್ರಕರ್ತ ಮಲ್ಲಿಕಾರ್ಜುನ್ ನಾಲವಾರ್ ಬೀಳ್ಕೊಡುಗೆ, ಪತ್ರಕರ್ತರು ಸುದ್ದಿಗಳ ಗೌಪ್ಯತೆ ಕಾಪಾಡುತ್ತಿಲ್ಲ: ಚಿನಿವಾರ್ ಕಳವಳ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರು ಸುದ್ದಿಗಳ ಗೌಪ್ಯತೆಯನ್ನು ಕಾಪಾಡುತ್ತಿಲ್ಲ ಎಂದು ಹಿರಿಯ ಪತ್ರಕರ್ತ ಬಸವರಾಜ್ ಅ. ಚಿನಿವಾರ್ ಅವರು ಕಳವಳ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಬುಧವಾರ ಹಮ್ಮಿಕೊಂಡ ಯಾದಗಿರಿಗೆ ವರ್ಗಾವಣೆಗೊಂಡ ಪ್ರಜಾವಾಣಿ ವರದಿಗಾರ ಮಲ್ಲಿಕಾರ್ಜುನ್ ನಾಲವಾರ್  ಅವರ ಬೀಳ್ಕೊಡುಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದಲೂ ಮುದ್ರಣ ಮಾಧ್ಯಮದ ಪತ್ರಕರ್ತರು ತಮ್ಮ ಸುದ್ದಿಗಳ ಗೌಪ್ಯತೆಯನ್ನು ಪತ್ರಿಕೆಗಳು ಪ್ರಕಟಗೊಳ್ಳುವವರೆಗೂ ಕಾಪಾಡಿಕೊಳ್ಳುತ್ತಿದ್ದರು ಎಂದರು.

ಎಂತಹ ಸುದ್ದಿಗಳೇ ಇದ್ದರೂ ಸಹ ಮತ್ತೊಬ್ಬ ಪತ್ರಕರ್ತರೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿರಲಿಲ್ಲ. ಅಲ್ಲದೇ ಒಂದು ವೇಳೆ ಬೇರೆ ಪತ್ರಕರ್ತರು ಸುದ್ದಿಯ ಕುರಿತು ಕೇಳಿದರೆ ಕೆಲವು ಅಂಶಗಳನ್ನು ಮಾತ್ರ ಹೇಳುತ್ತಿದ್ದರು. ಪತ್ರಕರ್ತ ತಾನು ಮಾಡಿದ ಸುದ್ದಿಯನ್ನು ಪತ್ರಿಕೆಯ ಸಂಪಾದಕರಿಗೆ ಮಾತ್ರ ಮುಟ್ಟಿಸುತ್ತಿದ್ದ. ಬೇರೆಯವರಿಗೆ ಸುದ್ದಿ ಸೋರಿಕೆ ಮಾಡುವುದು ವೃತ್ತಿ ಧರ್ಮಕ್ಕೆ ಅಪಮಾನ ಹಾಗೂ ಪತ್ರಿಕೆಗೆ ಮಾಡಿದ ಅವಮಾನ ಮತ್ತು ಸಂಪಾದಕರಿಗೆ ಮಾಡಿದ ಅವಮಾನ ಎಂದು ಭಾವಿಸುತ್ತಿದ್ದರು. ಈಗ ಹಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೃಶ್ಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಮುದ್ರಣ ಮಾಧ್ಯಮಗಳೂ ಸಹ ದೃಶ್ಯ ಮಾಧ್ಯಮಗಳ ರೀತಿಯಲ್ಲಿಯೇ ತಮ್ಮ ಸುದ್ದಿಗಳನ್ನು ಬಹಿರಂಗಪಡಿಸುತ್ತಿವೆ. ಇದು ಕಾಲಕ್ಕೆ ತಕ್ಕಂತೆ ಅನಿವಾರ್ಯವಾಗಿದ್ದರೂ ಸಹ ಸುದ್ದಿಗಳ ಗೌಪ್ಯತೆ ಹಾಗೂ ಘನತೆ ಮತ್ತು ಗೌರವವನ್ನು ಉಳಿಸಿಕೊಳ್ಳುವಲ್ಲಿ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.

ಜನಸಾಮಾನ್ಯರು ಊಟ, ಉಪಹಾರವನ್ನು ಹಂಚಿಕೊಳ್ಳುವ ರೀತಿಯಲ್ಲಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಪತ್ರಕರ್ತರು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಈ ಹಿಂದೆ ಆ ರೀತಿ ಮಾಡಿದರೆ ಪತ್ರಿಕಾ ಧರ್ಮಕ್ಕೆ ಮಾಡಿದ ಅಪಚಾರವಾಗುತ್ತಿತ್ತು. ಈಗ ಅಂತಹ ಅಪಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪ್ರತಿಯೊಂದು ಸುದ್ದಿಗಳನ್ನೂ ಎಲ್ಲರೂ ಹಂಚಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡುವಂತಹ ಉತ್ತಮ ಪತ್ರಕರ್ತರಿದ್ದಾರೆ. ಆದಾಗ್ಯೂ, ಅವರಿಗೆ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಹಳೆಯ ಮೈಸೂರು ಭಾಗದವರು ಮತ್ತು ಮಧ್ಯ ಕರ್ನಾಟಕದವರಿಗೆ ಸ್ಥಾನಿಕ ಸಂಪಾದಕರನ್ನಾಗಿ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಧೀಮಂತ ಪತ್ರಕರ್ತರಿಗೆ ಸಾಕಷ್ಟು ಅನ್ಯಾಯವನ್ನೂ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಅವರು ಹೇಳಿದರು.

ಮಲ್ಲಿಕಾರ್ಜುನ್ ನಾಲವಾರ್ ಅವರು ಹೈದ್ರಾಬಾದ್‍ನಲ್ಲಿ ಸೇವೆ ಸಲ್ಲಿಸಿ, ಸ್ವ ಜಿಲ್ಲೆಯಲ್ಲಿ ನಾಲ್ಕು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ. ಈಗ ನೆರೆಮನೆ ಯಾದಗಿರಿಗೆ ಹೋಗುತ್ತಿದ್ದಾರೆ. ಹೊಸದಾಗಿ ಜಿಲ್ಲೆಗೆ ಬರುವ ಪತ್ರಕರ್ತರಿಗೆ ಸ್ವಾಗತಿಸುವ ಹಾಗೂ ಇಲ್ಲಿಂದ ವರ್ಗಾವಣೆಯಾಗುವ ಎಲ್ಲ ಪತ್ರಕರ್ತರಿಗೂ ಸಂಘದಿಂದ ಸೂಕ್ತ ಗೌರವ ಕೊಡಬೇಕು. ಕೇವಲ ಪತ್ರಕರ್ತರಿಗೆ ಅಲ್ಲದೇ ಅವರ ಪತ್ನಿಗೂ ಸಹ ಗೌರವ ಕೊಡುವ ಮೂಲಕ ಸಂಘವು ಅವರೊಂದಿಗೆ ಇದೆ ಎಂಬ ರೀತಿಯಲ್ಲಿ ಗೌರವ ಕೊಡುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ರಮೇಶ್ ಮೇಳಕುಂದಾ, ಬ್ರಹ್ಮಾನಂದ್ ಅರಳಿ, ಪ್ರವೀಣರೆಡ್ಡಿ, ಓಂಪ್ರಕಾಶ್ ಮಣ್ಣೂರ್, ಬಜರಂಗಬಲಿ, ದತ್ತಾತ್ರೇಯ್ ಪಾಟೀಲ್, ಸಿದ್ದು ಸಾತಿಹಾಳ್, ದೇವಿಂದ್ರ ಜಡಿ, ದಸ್ತಗೀರ್ ನದಾಫ್, ಸೋಮೇಶ್ ಪಾಟೀಲ್, ಬಾಬುರಾವ್ ಕೋಬಾಳ್, ಶರಣಯ್ಯ ಸ್ವಾಮಿ ಹಿರೇಮಠ್, ಅನಿಲ್ ಸ್ವಾಮಿ, ಪುರುಷೋತ್ತಮ್ ಮುಂತಾದವರು ಮಾತನಾಡಿ, ಮಲ್ಲಿಕಾರ್ಜುನ್ ನಾಲವಾರ್ ಅವರು ವಸ್ತುನಿಷ್ಠ ವರದಿಗಾರರಾಗಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲ ಪತ್ರಕರ್ತರೊಂದಿಗೂ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ. ಅವರು ನೆರೆಯ ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಶೀಘ್ರವೇ ಬಡ್ತಿ ಹೊಂದಿ ಮತ್ತೆ ಸ್ವಜಿಲ್ಲೆಗೆ ಆಗಮಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರವೀಣ್ ಪಾರಾ, ಶಿವರಂಜನ್ ಸತ್ಯಂಪೇಟೆ, ಸಂಗಮನಾಥ ರೇವತಗಾಂವ್, ಗಂಗಾಧರ್ ಹಿರೇಮಠ್, ಮಹೇಶ್ ಚೌಕಿಮಠ್, ಶಂಕರಬಾಬು ರೆಡ್ಡಿ, ವಿಜಯಕುಮಾರ್ ಗಾಜರೆ, ಬಿರಾದಾರ್ ಶಿವಕುಮಾರ್, ರಾಚಪ್ಪ ಜಂಬಗಿ, ಶಿವಕುಮಾರ್ ಯಲ್ದೆ ಮುಂತಾದವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!