Oplus_0

ಅ.1 ರಂದು ಡಾ.ಸಿದ್ಧತೋಟೇಂದ್ರ ಶ್ರೀಗಳ ಜನ್ಮದಿನೋತ್ಸವ | ನಾಳೆಯಿಂದ ನಾಲವಾರ ಮಠದಲ್ಲಿ ನವರಾತ್ರಿ ಸಂಭ್ರಮ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಶ್ರೀಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೋತ್ಸವ ಸಮಾರಂಭ ಅಕ್ಟೋಬರ್ 1 ರ ಮಹಾನವಮಿಯ ಆಯುಧಪೂಜೆ ದಿನದಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.

ಪ್ರಸ್ತುತ ಪೂಜ್ಯರ ಜನ್ಮದಿನೋತ್ಸವ ಹಾಗೂ ಮಠದ ಹಿರಿಯ ಗುರುಗಳ ಪುಣ್ಯಸ್ಮರಣೋತ್ಸವ ಪ್ರಯುಕ್ತ ಶ್ರೀಮಠದಲ್ಲಿ ನಾಳೆಯಿಂದ ಪ್ರತಿನಿತ್ಯ ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ ಹಾಗೂ ಪ್ರತಿದಿನ ರಾತ್ರಿ ಸದ್ಭಕ್ತರಿಂದ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಮಹಾ ಪಾದಪೂಜೆ ನಡೆಯಲಿದ್ದು, ಇದೇ ವೇಳೆ ನಾಡಿನ ವಿವಿಧ ಕಲಾವಿದರಿಂದ ಸಂಗೀತ ನಾದಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತರಿಗೆ ಮಹಾಪ್ರಸಾದ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದ್ದಾರೆ.

ಅ.1 ರಂದು ಬುಧವಾರ ಮಹಾನವಮಿಯ ಆಯುಧ ಪೂಜೆಯ ದಿನದಂದು ನಡೆಯುವ ಜನ್ಮದಿನೋತ್ಸವ ಹಾಗೂ ಪುಣ್ಯಾರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಕ್ತರಿಂದ ತುಲಾಭಾರ, ಪೂಜ್ಯರು ಬರೆದ ಪುಸ್ತಕಗಳ ಬಿಡುಗಡೆ, ಪ್ರಸಿದ್ಧ ಚಲನಚಿತ್ರ ಹಿನ್ನಲೆ ಗಾಯಕರಿಂದ ಸಂಗೀತ ರಸಮಂಜರಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

ದೇಶದ ವಿವಿಧ ಭಾಗಗಳ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯುವ ಈ ಸಮಾರಂಭಕ್ಕೆ ನಾಡಿನ ಹಿರಿಯ ಮಠಾಧೀಶರು, ಸಚಿವರು, ಶಾಸಕರು, ಸಾಹಿತಿಗಳು ಹಾಗೂ ಕಲಾವಿದರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಆಧ್ಯಾತ್ಮಿಕ ಲೋಕದಲ್ಲಿ ಆರೂಢ ಅವಸ್ಥೆಯನ್ನು ತಲುಪಿ, ಹಲವು ಲೀಲೆಗಳನ್ನು ತೋರಿ, ಭಕ್ತರನ್ನು ಉದ್ಧರಿಸಿದ ಶ್ರೀಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಪವಾಡಪುರುಷ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಮತ್ತು ಪ್ರಸ್ತುತ ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನ ಒಂದೇ ದಿನ ಆಚರಣೆಗೊಳ್ಳುವುದು ಇಲ್ಲಿನ ವಿಶೇಷ.

ಈ ವಿಶೇಷ ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಮಹಾದೇವ ಗಂವ್ಹಾರ ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!