ಚಿತ್ತಾಪುರ ಸಮೀಕ್ಷೆ ಪ್ರಗತಿ ಶೇ.4, ಜಿಲ್ಲೆಯಲ್ಲಿ 4 ಸ್ಥಾನ | ತಾಲೂಕಿನಲ್ಲಿ 49,270 ಮನೆಗಳ ಸಮೀಕ್ಷೆಗೆ 458 ಗಣತಿದಾರರು: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಸೆ.25 ರವರೆಗೆ ಚಿತ್ತಾಪುರ ತಾಲೂಕಿನಲ್ಲಿ ಕುಟುಂಬಗಳ ಸಮೀಕ್ಷೆಯ ಪ್ರಗತಿ ಶೇ. 4 ರಷ್ಟು ಆಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದರು.
ಶುಕ್ರವಾರ ನಾಗಾವಿ ಎಕ್ಸಪ್ರೆಸ್ ನೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ 49,270 ಮನೆಗಳಿದ್ದು, ಸಮೀಕ್ಷೆಗಾಗಿ 458 ಬ್ಲಾಕ್ ಮಾಡಲಾಗಿದೆ ಇದಕ್ಕಾಗಿ 458 ಗಣತಿದಾರರನ್ನು ನಿಯೋಜಿಸಲಾಗಿದೆ ಈ ಪೈಕಿ 430 ಗಣತಿದಾರರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೈರು ಹಾಜರಿಯಾದ 28 ಗಣತಿದಾರರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಉಳಿದಂತೆ 23 ಮೇಲ್ವಿಚಾರಕರು, 11 ಮಾಸ್ಟರ್ ಟ್ರೈನಿ, 4 ಟೆಕ್ನಿಕಲ್ ಟ್ರೈನಿ, ಇದರ ಉಸ್ತುವಾರಿ ನೋಡಿಕೊಳ್ಳಲು ಸೇಡಂ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ, ಸದಸ್ಯ ಕಾರ್ಯದರ್ಶಿ ಬಿಸಿಎಂ ಅಧಿಕಾರಿ, ಸದಸ್ಯರಾಗಿ ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಚಿತ್ತಾಪುರ-ವಾಡಿ ಪುರಸಭೆ ಮುಖ್ಯಾಧಿಕಾರಿಗಳು, ಸಿಡಿಪಿಒ ಹಾಗೂ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಭೂ ಸ್ವಾಧೀನ ಅಧಿಕಾರಿ ರಾಮಚಂದ್ರ ಗಡಾದೆ ಅವರು ಸಮೀಕ್ಷೆ ಕರ್ತವ್ಯದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಮೀಕ್ಷೆ ಕಾರ್ಯ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅಲ್ಲದೇ ಸರ್ವರ್ ಸಮಸ್ಯೆ ಹಾಗೂ ಒಟಿಪಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ತಿಳಿಸಿದ್ದಾರೆ ಹೀಗಾಗಿ ಗಣತಿದಾರರು ಯಾವುದೇ ನೆಪ ಹೇಳದೆ ನಿತ್ಯ ಕುಟುಂಬಗಳ ಸಮೀಕ್ಷೆ ಕಾರ್ಯದಲ್ಲಿ ತೊಡಗಬೇಕು ಎಂದು ತಿಳಿಸಿದ್ದಾರೆ.
ಒಬ್ಬ ಗಣತಿದಾರರಿಗೆ ನಿತ್ಯ 10 ಕುಟುಂಬಗಳ ಸಮೀಕ್ಷೆ ಮಾಡುವ ಜವಾಬ್ದಾರಿ ನೀಡಲಾಗಿದೆ, ಒಟ್ಟಾರೆ ಪ್ರತಿಯೊಬ್ಬರಿಗೂ ಕನಿಷ್ಠ 77 ಗರಿಷ್ಠ 140 ಕುಟುಂಬಗಳ ಸಮೀಕ್ಷೆ ಮಾಡುವ ಗುರಿ ನೀಡಲಾಗಿದೆ. ಸೆ.25 ರ ದತ್ತಾಂಶ ಪ್ರಕಾರ ಸಮೀಕ್ಷೆಯಲ್ಲಿ ಚಿತ್ತಾಪುರ ತಾಲೂಕು ಜಿಲ್ಲೆಯ 4 ನೇ ಸ್ಥಾನದಲ್ಲಿದೆ ಎಂದು ಹೇಳಿದರು.

