ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಕುಟುಂಬಸ್ಥರಿಗೆ ದಿನಸಿ ಕಿಟ್ ವಿತರಣೆ | ಎಂಪಿ ರಾಧಾಕೃಷ್ಣ ದೊಡ್ಡಮನಿ ಅವರಿಂದ ಜಿಲ್ಲೆಗೆ 2500, ಚಿತ್ತಾಪುರಕ್ಕೆ 500 ದಿನಸಿ ಕಿಟ್: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಕುಟುಂಬಗಳಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು 2500 ದಿನಸಿ ಕಿಟ್ ನೀಡಿದ್ದಾರೆ ಅದರಲ್ಲಿ ಚಿತ್ತಾಪುರ ತಾಲೂಕಿಗೆ 500 ಕಿಟ್ ಗಳು ನೀಡಿದ್ದಾರೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಪಟ್ಟಣದ ಬಾಹರಪೇಟ್ ಏರಿಯಾದಲ್ಲಿ ಮಳೆ ನೀರು ನುಗ್ಗಿದ 35 ಮನೆಗಳ ಕುಟುಂಬಸ್ಥರಿಗೆ ಶುಕ್ರವಾರ ದಿನಬಳಕೆಯ ದಿನಸಿ ಕಿಟ್ ವಿತರಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳವಡಗಿ 169 ಹಾಗೂ ಗುಂಡಗುರ್ತಿ 136 ಕುಟುಂಬಸ್ಥರಿಗೆ ಕಿಟ್ ವಿತರಣೆ ಮಾಡಲಾಗಿದೆ. ಉಳಿದ ಕಿಟ್ ಗಳನ್ನು ಮತ್ತೆ ಎಲ್ಲಾದರೂ ಮಳೆ ನೀರು ನುಗ್ಗಿದ ವರದಿ ಬಂದರೆ ಅವರಿಗೂ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಕಿಟ್ ನಲ್ಲಿ ಏನೇನು ಇದೆ:
ಅಕ್ಕಿ 5 ಕೆ.ಜಿ, ತೊಗರಿ ಬ್ಯಾಳಿ 1 ಕೆ.ಜಿ, ಸಕ್ಕರೆ 1 ಕೆ.ಜಿ, ಅಡುಗೆ ಎಣ್ಣೆ 1 ಕೆ.ಜಿ, ಉಪ್ಪು 1 ಕೆ.ಜಿ, ತಲೆ ಎಣ್ಣೆ, ಚಾಯಿಪತ್ತಿ, ಮಸಲಾ, ಖಾರದಪುಡಿ, ಟೂತ್ಪೇಸ್ಟ್, ಬ್ರಶ್ ಸೇರಿದಂತೆ ಇತರೆ ಪಾಕಿಟ್ ಗಳು ಇವೆ.
ಗಂಜಿ ಕೇಂದ್ರಗಳ ಮಾಹಿತಿ:
ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಪ್ರವಾಹ ಕೂಡ ಬರುತ್ತಿದೆ ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಹಸೀಲ್ದಾರ್ ಅವರು ಮಾಹಿತಿ ನೀಡಿದರು.
ಸನ್ನತಿ, ಕೊಲ್ಲೂರು, ಮಾರಡಗಿ, ಕಡಬೂರ, ಬಳವಡಗಿ, ಕಣಸೂರ, ಶಾಮನೂರು, ಗುಂಡಗುರ್ತಿ ಗ್ರಾಮಗಳಲ್ಲಿ ಒಟ್ಟು 8 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಸದಸ್ಯ ಪ್ರಭು ಗಂಗಾಣಿ, ಕಂದಾಯ ನಿರೀಕ್ಷಕ ಮಹ್ಮದ್ ಸುಬಾನ್, ಮೈನೋದ್ದಿನ್ ಸೇರಿದಂತೆ ಇತರರು ಇದ್ದರು.

