Oplus_0

ಮಾನ್ಯಾಳ ಕ್ರೂರ ಹತ್ಯೆಯ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು | ಹೆತ್ತ ಕರುಳು ಬಳ್ಳಿಯನ್ನೇ ಕತ್ತರಿಸಿದ ಪಾಪಿಯ ಕೃತ್ಯಕ್ಕೆ ಅಯ್ಯಪ್ಪ ರಾಮತೀರ್ಥ ಉಗ್ರ ಖಂಡನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ನಡೆದ ಮಾನ್ಯಾಳ ಕ್ರೂರ ಹತ್ಯೆಯ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಮಗಳನ್ನು ಪೋಷಿಸಿ ಅವಳ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿ ಆಶೀರ್ವಾದಿಸಬೇಕಾದ ತಂದೆಯೇ, ಆಕೆಯ ಜೀವವನ್ನೇ ತೆಗೆದಿದ್ದು ವಿಪರ್ಯಾಸ ಅಲ್ಲದೆ ಆಕೆಯ ಗರ್ಭದಲ್ಲಿ ಈಗತಾನೆ ಬೆಳೆಯುತ್ತಿರುವ ಹಸಿ ಕಂದಮ್ಮನನ್ನು ಸಹ ಈ ಭೂಮಿಗೆ ಬರದ ಹಾಗೆ ಆ ತಾಯಿಯ ಗರ್ಭದಲ್ಲಿಯೇ ಹೊಸಕಿ ಹಾಕಿ ಸಮಾಧಿ ಮಾಡಿ ಕ್ರೌರ್ಯದ ಪರಮಾವಧಿಯನ್ನು ಮೆರೆದ ಈ ಕಲಿಯುಗದ ಈ ಮಹಾ ಪಾಪಿ ಅಪ್ಪ ಎಂದು ಸಾಮಾಜಿಕ ಹೋರಾಟಗಾರ ಅಯ್ಯಪ್ಪ ರಾಮತೀರ್ಥ ಉಗ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಂತ್ರಜ್ಞಾನದ ಈ ಯುಗದಲ್ಲಿ ನಾವು ಎಷ್ಟೇ ಮುಂದುವರಿದರೂ ಮನುಷ್ಯನ ಉಚ್ಚ, ನೀಚ ಹೀನ ಮನಸ್ಥಿತಿಗಳು ಅರ್ಥವಿಲ್ಲದ ಜಾತಿ ಶ್ರೇಷ್ಠತೆಯ ಸಂಕೋಲೆಯಲ್ಲಿ ಇಂದಿಗೂ ಅವನು ಬಂಧಿಯಾಗಿರುವುದು ಮಾತ್ರ ದುರಂತ ಎಂದು ತಿಳಿಸಿದ್ದಾರೆ.

ಈ ನೆಲದ ಸಂತರು ದಾರ್ಶನಿಕರು, ಜಗಜ್ಯೋತಿ ಬಸವಣ್ಣ, ಶ್ರೀ ನಾರಾಯಣ ಗುರು, ಜ್ಯೋತಿ ಬಾಪುಲೆ, ಶಾಹು ಮಹಾರಾಜ್, ಸ್ವಾಮಿ ವಿವೇಕಾನಂದ ಡಾ.ಬಿ.ಆರ್. ಅಂಬೇಡ್ಕರ್ ರಂತಹ ಮಹನೀಯರು ಸಮಾನತೆಯ ಬೀಜ ಬಿತ್ತಿದ ಈ ಮಣ್ಣಿನಲ್ಲಿ, ಇಂದಿಗೂ ಅಂತರ್ಜಾತಿ ವಿವಾಹದ ಕಾರಣಕ್ಕೆ ಅಮಾನವೀಯ ಕೊಲೆಗಳು ದೇಶಾದ್ಯಂತ ನಡೆಯುತ್ತಿರುವುದು ನಮ್ಮ ಸಮಾಜ ಹಾಗೂ ನಮ್ಮನ್ನು ಆಳುವ ಸರ್ಕಾರಗಳ ಭ್ರಷ್ಟ ವ್ಯವಸ್ಥೆಯ ಸೋಲೇ ಆಗಿದೆ. ಸಂವಿಧಾನದ ಕಾನೂನುಗಳು ಕೇವಲ ಕಾಗದದ ಮೇಲೆ ಇದ್ದು ಅವುಗಳು ಕಾರ್ಯಗತಕ್ಕೆ ಬಾರದಿದ್ದರೆ ಏನು ಪ್ರಯೋಜನ. ಮನುಷ್ಯತ್ವದ ಅರಿವು ಪ್ರತಿಯೊಬ್ಬರ ಹೃದಯದಲ್ಲಿ ಮೂಡಬೇಕಿದೆ ಎಂದು ತಿಳಿಸಿದ್ದಾರೆ.

ಹೆತ್ತ ಕರುಳು ಬಳ್ಳಿಯನ್ನೇ ಕತ್ತರಿಸಿದ ಈ ಪಾಪಿಯ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಆ ಅಮಾಯಕ ನನ್ನ ತಂಗಿ ಸ್ವರೂಪಿ ಮಾನ್ಯಳಿಗೆ ಈ ಸಮಾಜದ ಪರವಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ಜಾತಿಯ ಅಂಧ ಅಭಿಮಾನ ದುರಂಹಕಾರ ನೆತ್ತಿಗೇರಿ ತಾನು ಹೆತ್ತ ಕುಡಿಯನ್ನೂ ಸಹ ಮೀರಿ ಬೆಳೆಯುತ್ತಿದೆ ಎಂದರೆ ಇಂದು ನಾವು ಎಂತಹ ಹೀನ ಸಮಾಜದಲ್ಲಿ ಬದುಕುತ್ತಿದ್ದೇವೆ? ಎಂದು ನಾನು ಇಲ್ಲಿ ಹೇಳಲು ಹೃದಯ ಭಾರವಾಗುತ್ತಿದೆ. ನಾವೆಲ್ಲರೂ ವಾಸ್ತವದಲ್ಲಿ ಇಂದಿಗೂ ಜಾತಿಯ ವಿಷವರ್ತುಲದಲ್ಲೇ ಹುಟ್ಟುತ್ತಾ ಅದೇ ವಿಷ ವರ್ತುಲದಲ್ಲಿ ಬದುಕುತ್ತಾ ಅಲ್ಲಿಯೇ ಕ್ರೂರವಾಗಿ ಬಲಿಯಾಗುತ್ತಿರುವುದು ಎಂಬುದಕ್ಕೆ ಮಾನ್ಯಾಳ ಈ ಮನಕಲಕುವ ರಕ್ತ ಚರಿತ್ರೆ ಘಟನೆಯೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಮಹಾತ್ಮರು ತಮ್ಮ ಬೆವರು ಸುರಿಸಿ ಅವರ ರಕ್ತ ಸುಟ್ಟು ಕಟ್ಟಿ ಬೆಳೆಸಿದ ಸಮಾನತೆಯ ಅಡಿಪಾಯದ ಕನಸುಗಳು ಇಂದಿಗೂ ನಮ್ಮಿಂದ ನನಸಾಗುತ್ತಿಲ್ಲ ಎಂಬ ಖೇದವೂ ಈ ಘಟನೆಯಿಂದ ಇಲ್ಲಿ ಸ್ಪಷ್ಟವಾಗುತ್ತಿದೆ. ಪ್ರೀತಿ, ಸ್ನೇಹ, ವಾತ್ಸಲ್ಯ, ನೈತಿಕ, ಸಾಮರಸ್ಯ ಹಾಗೂ ಧರ್ಮಕ್ಕಿಂತಲೂ ತನ್ನ ಜಾತಿಯೇ ಶ್ರೇಷ್ಠ ಎನ್ನುವ ಕುರುಡು ನಂಬಿಕೆ ಇನ್ನೂ ಎಷ್ಟು ಮಾನ್ಯಳಂಥ ಜೀವಗಳನ್ನು ಇಲ್ಲಿ ಬಲಿ ಪಡೆಯುತ್ತೋ ಏನೋ ಎಂಬುದು ನಮಗೆ ತಿಳಿಯದಾಗಿದೆ.

ಇಂತಹ ಅಮಾನವೀಯ ಕೃತ್ಯ ಎಸಗಿದವರಿಗೆ ಈ ನೆಲದ ಕಾನೂನುಗಳು ಅಂತಿಮವಾಗಿ ಪೋಲೀಸ್ ಎನ್ಕೌಂಟರ್ ಅಥವಾ ಗಲ್ಲು ಶಿಕ್ಷೆಯನ್ನೇ ನೀಡುವುದೇ ಸೂಕ್ತ ಎಂದು ನನಗನ್ನಿಸುತ್ತದೆ ಎಂದು ಅಯ್ಯಪ್ಪ ರಾಮತೀರ್ಥ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!