ಆಮೆಗತಿಯಲ್ಲಿ ಸಾಗಿದ ಭಂಕಲಗಿ ಶಾಲಾ ಕಟ್ಟಡ ಕಾಮಗಾರಿ | ಗುತ್ತಿಗೆದಾರರ ದಿವ್ಯ ನಿರ್ಲಕ್ಷ್ಯ, ಮಕ್ಕಳ ಶಿಕ್ಷಣಕ್ಕೆ ತೊಂದರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಲ್ಯಾಂಡ್ ಆರ್ಮಿ ಗುತ್ತಿಗೆಯಲ್ಲಿ ನಡೆಯುತ್ತಿರುವ ತಾಲೂಕಿನ ಭಂಕಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ, ಇದರಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಇಷ್ಟಾದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ಈ ಶಾಲೆಯಲ್ಲಿ 1 ನೇ ತರಗತಿಯಿಂದ 8 ನೇ ತರಗತಿಯಲ್ಲಿ ಒಟ್ಟು 140 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಅಗತ್ಯ ಶಾಲಾಕೋಣೆಗಳು, ಮೂಲಭೂತ ಸೌಲಭ್ಯಗಳು ಇಲ್ಲದೇ ಇರುವುದರಿಂದ ಮಕ್ಕಳ ಶಿಕ್ಷಣದ ಮೇಲೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಪರೀಕ್ಷೆ ಸಮಯದಲ್ಲಿ ಗ್ರಾಮದ ದೇವಸ್ಥಾನ ಹಾಗೂ ಹಳೆಯ ಕಟ್ಟಡದಲ್ಲಿ ನಡೆಸುವ ದುಸ್ಥಿತಿ ಬಂದಿದೆ.
ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಒಂದೂವರೇ ವರ್ಷ ಆದರೂ ಕೆಲಸ ಮಂದಗತಿಯಲ್ಲಿ ಸಾಗಿದ ಪರಿಣಾಮ ಶಾಲಾ ಆವರಣದ ಬಯಲು ಜಾಗದಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ರಜಾ ದಿನಗಳು ಕಳೆದ ಬಳಿಕವೂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಕ್ಷಣಗಳೂ ಕಾಣುತ್ತಿಲ್ಲ.
ಶೈಕ್ಷಣಿಕವಾಗಿ ಹಿಂದುಳಿದ ಹೈ-ಕ ಪ್ರದೇಶದಲ್ಲಿ ಶಿಕ್ಷಣದ ಪ್ರಗತಿಗೆ ಸರಕಾರ ಕೆಕೆಆರ್’ಡಿ ಅನುದಾನದಲ್ಲಿ ಒಟ್ಟು 9 ಕೋಣೆಗಳು ಮಂಜೂರು ಮಾಡಿ ಅಗತ್ಯ ಅನುದಾನ ಸಹ ಬಿಡುಗಡೆ ಮಾಡಿದೆ. ಆದರೆ ಗುತ್ತಿಗೆದಾರರ ವಿಳಂಬ ನೀತಿಯಿಂದ ಮತ್ತು ಮೇಲುಸ್ತುವಾರಿ ಮಾಡುವ ಅಧಿಕಾರಿಗಳ ಅಸಡ್ಡೆಯಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ.
ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶೈಕ್ಷಣಿಕ ಅಭಿವದ್ಧಿಗೆ ಸರಕಾರದ ಮೇಲೆ ಒತ್ತಡ ಹಾಕಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾಮಗಾರಿ ಗುಣಮಟ್ಟ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕಾಳಜಿ ವಹಿಸಬೇಕಾದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವಹಿಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಗುತ್ತಿಗೆದಾರರಿಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಬೇಕಿದೆ.
“ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದ ಲ್ಯಾಂಡ್ ಆರ್ಮಿ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ ಹಾಗೂ ಕಟ್ಟಡ ಕಾಮಗಾರಿಯನ್ನು ನಿಧಾನ ಮಾಡುತ್ತಿದೆ. ಉಸ್ತುವಾರಿ ನೋಡಿಕೊಳ್ಳಬೇಕಾದ ಅಧಿಕಾರಿಗಳೂ ಚಕಾರವೆತ್ತದಿರುವುದು ಅನುಮಾನಕ್ಕೆ ಎಡೆಮಾಡಿದೆ. ಕೂಡಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು”.-ಮೌನೇಶ್ ಭಂಕಲಗಿ ರೈತ ಸಂಘದ ತಾಲೂಕಾಧ್ಯಕ್ಷರು ಚಿತ್ತಾಪುರ.
“ಪ್ರಸ್ತುತ ಮುಖ್ಯಗುರುಗಳಿಗೆ, ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಒಂದೇ ಒಂದು ಕೋಣೆಯಿದೆ, ಶಿಕ್ಷಕರು ಹೊರಗಡೆ ಕುಳಿತುಕೊಂಡು ತಮ್ಮ ಚಟುವಟಿಕೆ ಮಾಡುತ್ತಾರೆ ಹಾಗೂ ಮಕ್ಕಳನ್ನು ಸಹ ಹೊರಗಡೆ ಮೈದಾನದಲ್ಲಿ ಕುಳ್ಳಿರಿಸಿ ಪಾಠ ಮಾಡಬೇಕಿದೆ, ಈಗ ನಿರಂತರ ಮಳೆ ಬರುತ್ತಿರುವುದರಿಂದ ಪರಿಸರ ಹದಗೆಟ್ಟಿದೆ, ನೆಲ ಕೆಸರು ಗದ್ದೆ ಯಾದರೂ ಅಲ್ಲಿಯೇ ಕುಳ್ಳಿರಿಸಿ ಪಾಠ ಮಾಡುವಂತಹ ಹೀನಾಯ ಪರಿಸ್ಥಿತಿ ಇದೆ. ಕೂಡಲೇ ಕಟ್ಟಡ ಪೂರ್ಣಗೊಳಿಸಲು ಹಲವು ಬಾರಿ ಮನವಿ ಮಾಡಿದರೂ ಗುತ್ತಿಗೆದಾರರು ಮಾತ್ರ ಹಾರಿಕೆ ಉತ್ತರ ನೀಡಿದ್ದಾರೆ”.-ನೇತ್ರಾವತಿ ಮುಖ್ಯಗುರುಗಳು.

