ಭಿಕ್ಷಾಟನೆ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 529 ಅಂಕಗಳು | ಬಡ ವಿದ್ಯಾರ್ಥಿಗಳ ಪಾಲಿಗೆ ಸುಜಾತಾ ಭರವಸೆಯ ಬೆಳಕು
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸುಜಾತಾ ಭೀಮಶಾ ಗೊಲ್ಲರ್ ಇತ್ತೀಚೆಗೆ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.84.64 (529/625) ಪಡೆಯುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾಳೆ.
ಮೂಲತಃ ಅಲೆಮಾರಿ ಸಮುದಾಯವಾದ ಗೊಲ್ಲರ್ ಜನಾಂಗಕ್ಕೆ ಸೇರಿದ ಸುಜಾತಾ ಅವರದ್ದು ಅನಕ್ಷರಸ್ಥ ಕುಟುಂಬ. ಹೊಟ್ಟೆಪಾಡಿಗಾಗಿ ಪ್ರತಿದಿನ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳಬೇಕಾದ ಅನಿವಾರ್ಯತೆ ಈಕೆಯದು. ಒಂದು ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದರೂ, ಮನಸ್ಸಿನಲ್ಲಿ ಮಾತ್ರ ಶಿಕ್ಷಣದ ಕನಸಿತ್ತು. ಅಲೆಮಾರಿ ಬದುಕಿನ ಕಷ್ಟಗಳ ನಡುವೆ, ಸರ್ಕಾರಿ ಶಾಲೆಯ ಮೆಟ್ಟಿಲೇರಿ ಅಕ್ಷರ ಕಲಿತ ಈ ಪ್ರತಿಭೆ, ಇಂದು ತಾನು ಪಡೆದ ಅಂಕಗಳ ಮೂಲಕ ಬಡತನಕ್ಕೆ ಉತ್ತರ ನೀಡಿದ್ದಾಳೆ.
ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ ಎಂಬ ಬಸವಣ್ಣನವರ ವಚನದಂತೆ, ಆರ್ಥಿಕವಾಗಿ ಅಶಕ್ತಳಾದರೂ ಜ್ಞಾನದ ಸಂಪತ್ತನ್ನು ಗಳಿಸುವಲ್ಲಿ ಸುಜಾತಾ ಶ್ರೀಮಂತಳಾಗಿದ್ದಾಳೆ. ಇಂದಿನ ಆಧುನಿಕ ಯುಗದಲ್ಲಿ ಸಕಲ ಸೌಲಭ್ಯಗಳಿದ್ದೂ ಓದಲು ಹಿಂಜರಿಯುವ ವಿದ್ಯಾರ್ಥಿಗಳ ನಡುವೆ ಹರಿದ ಬಟ್ಟೆ, ಹಸಿವಿನ ಹೊಟ್ಟೆಯೊಂದಿಗೆ ಸುಜಾತಾ ತೋರಿದ ಛಲ ಎಲ್ಲರಿಗೂ ಮಾದರಿಯಾಗಿದೆ.
ಸುಜಾತಾಳ ಈ ಸಾಹಸಗಾಥೆಯನ್ನು ಗುರುತಿಸಿದ ಸ್ಥಳೀಯ ಶಿಕ್ಷಣಪ್ರೇಮಿ ಬಳಗದವರು, ಆಕೆಯ ಮನೆಗೆ ತೆರಳಿ ಸತ್ಕರಿಸಿದ್ದಾರೆ. ಈಕೆಯ ಭವಿಷ್ಯಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು ಎಂಬ ಆಶಯದೊಂದಿಗೆ ಆಕೆಯ ಮುಂದಿನ ಉನ್ನತ ಶಿಕ್ಷಣಕ್ಕೆ ಶುಭಹಾರೈಸಿದ್ದಾರೆ. ಅಲೆಮಾರಿ ಜನಾಂಗದಲ್ಲಿ ಅರಳಿದ ಈ ಅಪರೂಪದ ಪ್ರತಿಭೆ, ಕೇವಲ ಅಂಕಗಳನ್ನು ಗಳಿಸಿಲ್ಲ. ಬದಲಿಗೆ ಸಾವಿರಾರು ಬಡ ವಿದ್ಯಾರ್ಥಿಗಳ ಪಾಲಿಗೆ ಭರವಸೆಯ ದೀಪವಾಗಿದ್ದಾಳೆ.
ಬಡತನವು ಪ್ರತಿಭೆಗೆ ಅಡ್ಡಿಯಾಗುವುದಿಲ್ಲ, ಬದಲಾಗಿ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವಿದ್ದರೆ ಭಿಕ್ಷಾಟನೆಯಂತಹ ದಾರಿಯನ್ನು ತೊರೆದು ಉನ್ನತ ಶಿಕ್ಷಣ ಸಾಧಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ.

