ಚಿತ್ತಾಪುರ ಸಿವಿಲ್ ಕಾಂಟ್ರ್ಯಾಕ್ಟರ್ ಪುತ್ರಿಗೆ ನೀಟ್‌ನಲ್ಲಿ ಉತ್ತಮ ಅಂಕ | ವೈದ್ಯೆಯಾಗಿ, ಐಎಎಸ್ ಆಗುವ ಗುರಿಯಿದೆ: ಸಿಮ್ರಾನ್ ಬಾನು ಜುನೈದಿ
ನಾಗಾವಿ ಎಕ್ಸಪ್ರೆಸ್ ವಿಶೇಷ ವರದಿ
ಚಿತ್ತಾಪುರ: ಪಟ್ಟಣದ ಸಿವಿಲ್ ಕಾಂಟ್ರ್ಯಾಕ್ಟರ್ ಜಹೀರುದ್ದಿನ್ ಜುನೈದಿ ಪುತ್ರಿ ಸಿಮ್ರಾನ್ ಬಾನು ಜುನೈದಿ ನೀಟ್‌ನಲ್ಲಿ ಉತ್ತಮ ಅಂಕ ಪಡೆದಿದ್ದು, 720 ಕ್ಕೆ 657 ಅಂಕ ಪಡೆದು ಸಾಧನೆ ಮಾಡುವ ಮೂಲಕ ಚಿತ್ತಾಪುರ ತಾಲೂಕಿಗೆ ಕೀರ್ತಿ ತಂದಿದ್ದಾಳೆ.
ಸಿಮ್ರಾನ್ ಬಾನು ಶೈಕ್ಷಣಿಕ ಪಯಣ:
ಪ್ರಾಥಮಿಕ ವಿದ್ಯಾಭ್ಯಾಸ ಚಿತ್ತಾಪುರ ಪಟ್ಟಣದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದು, ಪ್ರೌಢ ಶಿಕ್ಷಣ ಕೋರವಾರ ಜವಾಹರ ನವೋದಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾಳೆ ಎಸ್ಸೆಸ್ಸೆಲ್ಸಿ ಯಲ್ಲಿ ಶೇ.97.6 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಳು. ನಂತರ ಕಲಬುರಗಿ ಶ್ರೀ ಶರಣಬಸವೇಶ್ವರ ರೆಸಿಡೆನ್ಸಿಯಲ್ ಸಂಯುಕ್ತ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಸಿಮ್ರಾನ್ ಬಾನು ಪಿಯುಸಿಯಲ್ಲಿ ಶೇ.99.33 ಅಂಕ ಪಡೆದು ರಾಜ್ಯಕ್ಕೆ 4 ನೇ ರ್ಯಾಂಕ್ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಫಸ್ಟ್ ರ್ಯಾಂಕ್ ಪಡೆದಿದ್ದಳು. ಪ್ರಸ್ತುತ ನೀಟ್‌ನಲ್ಲಿ 720 ಕ್ಕೆ 657 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದು ನಾಗಾವಿ ನಾಡು ಚಿತ್ತಾಪುರಕ್ಕೆ ಕೀರ್ತಿ ತಂದಿದ್ದಾಳೆ. ಅಲ್ಲದೇ ಜೆಇಇ ಮತ್ತು ಕೆ ಸೆಟ್ ನಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾಳೆ, ಆದರೂ ಅಂತಿಮವಾಗಿ ವೈದ್ಯೆಯಾಗುವ ಗುರಿಯಿದೆ ಎಂದು ತಿಳಿಸಿದ್ದಾಳೆ.
ಕಾಲೇಜಿನ ಸಮಯ ಹೊರತುಪಡಿಸಿ ಮತ್ತೆ ನಾಲ್ಕು ಗಂಟೆ ಓದಿಗಾಗಿ ಮೀಸಲಿಡುತ್ತಿದ್ದೆ. ಜತೆಗೆ ಕಾಲೇಜಿನ ಉಪನ್ಯಾಸಕರ ಬೋಧನೆ ಅತ್ಯುತ್ತಮವಾಗಿದ್ದು, ಹಾಸ್ಟ್‌ಲನಲ್ಲಿಯೂ ಕೇಳಿದ ಸಮಸ್ಯೆಗೆ ಪರಿಹಾರ ನೀಡುತ್ತಿದ್ದರು. ಆದ್ದರಿಂದ ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಪರಿಹಾರ ಸಿಗುತಿತ್ತು. ಈ ಹಿನ್ನೆಲೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂದು ಹೇಳಿದಳು.
ಐಎಎಸ್ ಆಗುವ ಕನಸು:
ಪ್ರಸ್ತುತ ನೀಟ್‌ನಲ್ಲಿ ಪಡೆದ ಅಂಕದ ಮೇಲೆ ಯಾವುದಾದರೂ ಏಮ್ಸ್ ನಲ್ಲಿ ಎಂಬಿಬಿಎಸ್ ಸೀಟ್ ಪಡೆದು ವಿದ್ಯಾಭ್ಯಾಸ ಮಾಡಲಾಗುವುದು. ನಂತರ ಯುಪಿಎಸ್‌ಸಿ ಪರೀಕ್ಷೆ ತಯಾರಿ ನಡೆಸಿ ಐಎಎಸ್ ಆಗುವ ಗುರಿಯಿದೆ ಎಂದು ಸಿಮ್ರಾನ್ ಜುನೈದಿ ತಿಳಿಸಿದ್ದಾಳೆ.
ಅವ್ವಾ ಜೀ ಅವರಿಂದ ಸನ್ಮಾನ:
ಶ್ರೀ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾ ಜೀ ಅವರು ನೀಟ್‌ನಲ್ಲಿ ಉತ್ತಮ ಸಾಧನೆಗೈದ ಸಿಮ್ರಾನ್ ಬಾನು ಹಾಗೂ ಪಾಲಕರಿಗೆ ಸನ್ಮಾನಿಸಿ ಆಶೀರ್ವದಿಸಿದರು.
“ನೀಟ್‌ನಲ್ಲಿ ಉತ್ತಮ ಅಂಕ ಪಡೆಯಲು ಕಾಲೇಜಿನ ಉಪನ್ಯಾಸಕರ ಉತ್ತಮ ಬೋಧನೆ ಅನುಕೂಲವಾಯಿತು. ಜತೆಗೆ ತಂದೆ-ತಾಯಿ ಆಶೀರ್ವಾದ ಜತೆಗೆ ಕಷ್ಟಪಟ್ಟು ಓದಿರುವುದು ನನ್ನ ಕೈ ಹಿಡಿಯಿತು. ಎಂಬಿಬಿಎಸ್ ಮಾಡಿ ಮುಂದೆ ಐಎಎಸ್ ಮಾಡುವ ಕನಸಿದೆ”.- ಸಿಮ್ರಾನ್ ಬಾನು ಜುನೈದಿ.
“ಮಗಳು ಸಿಮ್ರಾನ್ ಬಾನು ಎಲ್.ಕೆ.ಜಿ ಯಿಂದಲೂ ಓದಿನಲ್ಲಿ ಫಸ್ಟ್ ಇದ್ದಳು, ಪ್ರತಿ ಹಂತದಲ್ಲೂ ಉತ್ತಮ ಅಂಕ ಪಡೆಯುತ್ತಿದ್ದಳು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದಿದ್ದು ಈಗ ನೀಟ್‌ನಲ್ಲಿ ಉತ್ತಮ ಅಂಕ ಪಡೆದು ಅವಳ ವೈದ್ಯೆಯಾಗುವ ಕನಸು ಈಡೇರಿದೆ ಇದು ನಮ್ಮ ಕುಟುಂಬಕ್ಕೆ ಬಹಳ ಹರ್ಷವನ್ನುಂಟು ಮಾಡಿದೆ”.-ಜಹೀರುದ್ದಿನ್ ಜುನೈದಿ.

