Oplus_0

ಪ್ರಜಾ ಸೌಧದಲ್ಲಿ ಜಯಂತಿಯ‌ ಪೂರ್ವಭಾವಿ ಸಭೆ | ಹಡಪದ ಅಪ್ಪಣ್ಣ ಜಯಂತಿಗೆ ನಿರ್ಲಕ್ಷ್ಯ ಸಲ್ಲದು: ರಮೇಶ ಕೊಲ್ಲೂರು

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಹನ್ನೆರೆಡನೇ ಶತಮಾನದ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ನವರ ಜಯಂತಿಗೆ ನಿರ್ಲಕ್ಷ್ಯ ಮಾಡದೆ, ಸರ್ಕಾರದ ಆದೇಶದ ಪ್ರಕಾರ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಜಯಂತಿ ಆಚರಣೆ ಮಾಡಬೇಕು ಎಂದು ಹಡಪದ ಸಮಾಜದ ತಾಲೂಕು ಅಧ್ಯಕ್ಷ ರಮೇಶ ಹಡಪದ ಕೊಲ್ಲೂರು ಹೇಳಿದರು.

ಪ್ರಜಾ ಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಹಡಪದ ಅಪ್ಪಣ್ಣ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಡಪದ ಅಪ್ಪಣ್ಣ ಜಯಂತಿ ಅಷ್ಟೇ ಅಲ್ಲ ಬಹುತೇಕ ಎಲ್ಲ ಶರಣರ ಹಾಗೂ ರಾಷ್ಟ್ರ ನಾಯಕರ ಜಯಂತಿ ಮಾಡದೇ ಅವಮಾನ ಮಾಡಲಾಗುತ್ತದೆ, ಇದು ಪದೇ ಪದೇ ನಡೆದರೂ ಮೇಲಾಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ, ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಪೊಲೀಸ್ ಠಾಣೆಯಲ್ಲಿ ಜಯಂತಿ ಆಚರಣೆ ಮಾಡುವುದಿಲ್ಲ ಹೀಗಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಹಡಪದ ಅಪ್ಪಣ್ಣ ನವರ ಜಯಂತಿಗೆ ಬರುವ ಅನುದಾನವನ್ನು ನಮಗೆ ಮಾಹಿತಿ ನೀಡುವುದಿಲ್ಲ, ಕಳೆದ ಎರಡು ವರ್ಷಗಳಿಂದ  ಬಜೆಟ್ ಬಂದರೂ ನಮ್ಮ ಜಯಂತಿಗೇಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದಾಗ ಗ್ರೇಡ್ 2 ತಹಸೀಲ್ದಾರ್ ಅವರಿಂದ ಯಾವುದೇ ಸ್ವಷ್ಟ ಉತ್ತರ ಬರಲಿಲ್ಲ, ಆಗ ಸಮಾಜದ ಮುಖಂಡರು ಮತ್ತೇ ಪ್ರಶ್ನಿಸಿದಾಗ ಗ್ರೇಡ್ 1 ತಹಸೀಲ್ದಾರ್ ಅವರೊಂದಿಗೆ ಚರ್ಚೆ ಮಾಡಿ ತಿಳಿಸುತ್ತೇನೆ ಎಂದು ಸಮಜಾಯಿಷಿ ನೀಡಿದರು.

ಸರ್ಕಾರಿ ಜಯಂತಿಯನ್ನು ಪ್ರಜಾ ಸೌಧದ ಆವರಣದಲ್ಲಿ ಜು.29 ರಂದು ಬೆಳಗ್ಗೆ 11 ಗಂಟೆಗೆ ಸರಳವಾಗಿ ಆಚರಿಸಿ ನಂತರ ಪ್ರತ್ಯೇಕ ದಿನಾಂಕ ನಿಗದಿ ಮಾಡಿ ಸಾಮಾಜದ ವತಿಯಿಂದ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಮಾಡಲಾಗುವುದು ಆಗ ನಮಗೆ 2 ವರ್ಷದ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ಮಾತನಾಡಿ, ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಬೆಳಗ್ಗೆ 10.30 ಕ್ಕೆ ಜಯಂತಿ ಆಚರಿಸಿ ತಾಲೂಕು ಆಡಳಿತ ವತಿಯಿಂದ ಪ್ರಜಾ ಸೌಧದ ಆವರಣದಲ್ಲಿ ನಡೆಯುವ ಜಯಂತಿಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಭಾವಚಿತ್ರಕ್ಕೆ ಪ್ಲಾಸ್ಟಿಕ್ ಹಾರ ಉಪಯೋಗಿಸದೆ ಹೂವಿನ ಹಾರ ಉಪಯೋಗಿಸಬೇಕು ಎಂದು ಸೂಚಿಸಿದರು. ನಂತರ ಅಗಸ್ಟ್ 1 ರಂದು ಮಹಾಂತ್ ಶಿವಯೋಗಿಗಳ ಜಯಂತಿ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು, ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಹಾಜರಿದ್ದರು. ಬಿಸಿಎಂ ಅಧಿಕಾರಿ ಸುನೀತಾ ಉಡಗಿ, ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಶರಣಯ್ಯ ಗುತ್ತೇದಾರ, ಅರಣ್ಯಾಧಿಕಾರಿ ಜಾವೀದ್, ಹಡಪದ ಸಮಾಜದ ಪ್ರಧಾನ ಕಾರ್ಯದರ್ಶಿ ಕಲ್ಯಾಣಿ ಗುಂಡಗುರ್ತಿ, ಉಪಾಧ್ಯಕ್ಷ ಶೇಖಣ್ಣ ದಂಡಗುಂಡ, ಭೀಮಾಶಂಕರ್ ಹಡಪದ, ನಗರಾಧ್ಯಕ್ಷ ಮುರುಳಿಕುಮಾರ್ ಸಾತನೂರು, ಸಮಾಜ ಮುಖಂಡರಾದ ಅಶೋಕ್ ಚಿತ್ತಾಪುರ, ಶಿವಕುಮಾರ್ ನಾಲವಾರ, ಸಿದ್ದು ಬೀಮನಳ್ಳಿ ಸೇರಿದಂತೆ ಇತರರು ಇದ್ದರು. ಟಿಪಿಒ ಶಿವಶರಣಪ್ಪ ಮಂಠಾಳೆ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!